Hassan
: ತನ್ನ ಅಕ್ರಮ ಸಂಬಂಧಕ್ಕೆ ಕುಟುಂಬದವರು ಅಡ್ಡಿಯಾಗುತ್ತಾರೆ ಎಂದು ಮಹಿಳೆಯೊಬ್ಬಳು ಊಟದಲ್ಲಿ ವಿಷ ಬೆರೆಸಿ ಇಡೀ ಕುಟುಂಬವನ್ನು ಹತ್ಯೆ ಮಾಡಲು ಪ್ರಯತ್ನಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದ್ದು, ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೆರಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚೈತ್ರಾ (33) ಬಂಧಿತ ಮಹಿಳೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾರೆ ಎಂದು ಚೈತ್ರಾ ಊಟದಲ್ಲಿ ವಿಷ ಬೆರೆಸಿ, ತನ್ನ ಪತಿ, ಇಬ್ಬರು ಮಕ್ಕಳು ಹಾಗೂ ಅತ್ತೆ, ಮಾವನನ್ನು ಕೊಲ್ಲಲು ಯತ್ನಿಸಿದ್ದಾಳೆ. ಇದನ್ನು ತಿಳಿದ ಪತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ. ದೂರಿನ ಆಧಾರದ ಮೇರೆಗೆ ಚೈತ್ರಾ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
11 ವರ್ಷಗಳ ಹಿಂದೆ ಚೈತ್ರಾ ಗಜೇಂದ್ರ ಜೊತೆ ಮದುವೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಬಳಿಕ ಆಕೆಗೆ ಪುನೀತ್ ಎಂಬಾತನ ಪರಿಚಯವಾಗಿದ್ದು, ಆತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಆದರೆ ಇದರ ಬಗ್ಗೆ ತಿಳಿದ ಗಜೇಂದ್ರ ವಿಚಾರವನ್ನು ಆಕೆಯ ತಂದೆ ತಾಯಿಗೆ ತಿಳಿಸಿದ್ದ. ನಂತರ ಇಬ್ಬರ ನಡುವೆ ರಾಜಿ ಪಂಚಾಯ್ತಿ ಮಾಡಲಾಗಿದ್ದು, ದಂಪತಿ ಚೆನ್ನಾಗಿಯೇ ಇದ್ದರು.
ಈ ಘಟನೆಯ ಬಳಿಕ ಚೈತ್ರಾಗೆ ಶಿವು ಎಂಬುವವನ ಪರಿಚಯವಾಗಿ ಮತ್ತೆ ಅನೈತಿಕ ಸಂಬಂಧದಲ್ಲಿದ್ದಳು. ಈ ವಿಚಾರವೂ ಮನೆಯಲ್ಲಿ ಗೊತ್ತಾಗುತ್ತದೆ ಎಂದು ಭಾವಿಸಿ ಆಕೆ ಪ್ರಿಯಕರನೊಂದಿಗೆ ಸೇರಿ ಊಟದಲ್ಲಿ ವಿಷ ಬೆರೆಸಿ ಇಡೀ ಕುಟುಂಬವನ್ನು ಮುಗಿಸಲು ಪ್ರಯತ್ನಿಸಿದ್ದಳು. ತಕ್ಷಣ ಈ ವಿಚಾರ ತಿಳಿದು ಪತಿ ಗಜೇಂದ್ರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಚೈತ್ರಾ ಹಾಗೂ ಆಕೆಯ ಪ್ರಿಯಕರ ಶಿವುನನ್ನು ಪೊಲೀಸರು ಬಂಧಿಸಿದ್ದಾರೆ.

