ಹತ್ರಾಸ್: ಉತ್ತರ ಪ್ರದೇಶದ ಹತ್ರಾಸ್‌ನ ಬಳಿ ರಾಷ್ಟ್ರೀಯ ಹೆದ್ದಾರಿ 93ರಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 15 ಜನ ಸಾವನ್ನಪ್ಪಿದ್ದರೆ, ಅನೇಕರು ಗಂಭೀರ ಗಾಯಗೊಂಡಿದ್ದಾರೆ. ಬಸ್ ಹತ್ರಾಸ್‌ನಿಂದ ಆಗ್ರಾಕ್ಕೆ ತೆರಳುತ್ತಿದ್ದು, ಮಿನಿ ಟ್ರಕ್‌ನಲ್ಲಿದ್ದವರು ಸೇವಾಲ ಗ್ರಾಮಕ್ಕೆ ಹಿಂತಿರುಗುವಾಗ ಕನ್ವರ್‌ಪುರ ಗ್ರಾಮದ ಬಳಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪಘಾತದ ಬಗ್ಗೆ ತಿಳಿದು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
“ಆಗ್ರಾ-ಅಲಿಘರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಅನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸುವಾಗ ಬಸ್ ವ್ಯಾನ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ನಿಪುನ್ ಅಗರ್ವಾಲ್ ಅವರು, ಹೇಳಿದ್ದಾರೆ.

