ಹಾಸನ, ಮಂಗಳವಾರ: ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಶಿಕ್ಷಕರೊಬ್ಬರು ಪಾಠ ಬೋಧನೆ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಅಕಾಲಿಕವಾಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಮೃತಪಟ್ಟ ಶಿಕ್ಷಕರನ್ನು ಕೇರಳಾಪುರ ಗ್ರಾಮದ ಸತೀಶ್ (53) ಎಂದು ಗುರುತಿಸಲಾಗಿದೆ.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದಾಗ ಮುಖ್ಯ ಶಿಕ್ಷಕರು ಏಕಾಏಕಿ ಅಸ್ವಸ್ಥಗೊಂಡು ತರಗತಿ ಕೊಠಡಿಯಲ್ಲೇ ಕುಸಿದು ಬಿದ್ದಿದ್ದಾರೆ. ಘಟನೆ ಕಂಡ ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರು ತಕ್ಷಣ ನೆರವಿಗೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಬಳಿಕ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಕ್ರಮ ಕೈಗೊಂಡರೂ, ಹೃದಯಾಘಾತ ತೀವ್ರವಾಗಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ದುರ್ಘಟನೆಯಿಂದ ಶಾಲಾ ವಾತಾವರಣದಲ್ಲಿ ದುಃಖದ ಛಾಯೆ ಆವರಿಸಿತು. ಅಚ್ಚುಮೆಚ್ಚಿನ ಶಿಕ್ಷಕರ ಅಕಾಲಿಕ ನಿಧನದಿಂದ ವಿದ್ಯಾರ್ಥಿಗಳು ಕಣ್ಣೀರಿನಲ್ಲಿ ಮುಳುಗಿದ್ದು, ಗ್ರಾಮಸ್ಥರೂ ಶೋಕಸಾಗರದಲ್ಲಿ ತೇಲುತ್ತಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಮುಖ್ಯ ಶಿಕ್ಷಕರ ನಿಧನಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಹ ಶಿಕ್ಷಕರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.

