ಮಂಡ್ಯ : ಮಗನ ಸಾವಿನ ಸುದ್ದಿ ಕೇಳಿದ ತಾಯಿ ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ. ಮಂಡ್ಯದ ಮೆಟ್ಕಲ್ ಗ್ರಾಮದ ಕೃಷ್ಣಮೂರ್ತಿ(20) ಎಂಬಾತ ಅಪಘಾತದಲ್ಲಿ ಸಾವನ್ನಪ್ಪಿದ್ದನು. ಈ ವಿಷಯ ತಿಳಿದಂತ ಆತನ ತಾಯಿ ಮಹದೇವಮ್ಮ(48) ಕುಸಿದು ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಡಿ.21ರಂದು ಈ ಘಟನೆ ನಡೆದಿದೆ. ಎರಡು ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಬೈಕ್ ನಲ್ಲಿ ತೆರಳುತ್ತಿದ್ದಂತ ಕೃಷ್ಣಮೂರ್ತಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದನು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದನು.
ಈ ವಿಷಯನ್ನು ಗ್ರಾಮಸ್ಥರು ಆತನ ತಾಯಿ ಮಹದೇವಮ್ಮಗೆ ತಿಳಿಸಿದ್ದರು. ಈ ವಿಷಯ ತಿಳಿದು ಆಘಾತಗೊಂಡ ಅವರು ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ತಾಯಿ, ಮಗ ಇಬ್ಬರನ್ನು ಒಂದೆ ಸ್ಥಳದಲ್ಲಿ ಅಕ್ಕ ಪಕ್ಕ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

