ಬೆಂಗಳೂರು : ‘ಪೈಲ್ವಾನ್’ ಚಿತ್ರಕ್ಕಾಗಿ ಸುದೀಪ್ ಅವರಿಗೆ ಬಂದಿದ್ದ 2019ರ ಸಾಲಿನ ‘ಉತ್ತಮ ನಟ’ ಎಂಬ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ಕಿಚ್ಚ ನಯವಾಗೇ ತಿರಸ್ಕರಿಸಿ ಅದಕ್ಕೆ ಸೂಕ್ತ ಕಾರಣ ಕೊಟ್ಟಿದ್ದಾರೆ. ಕೆಲ ವರ್ಷಗಳಿಂದ ಪ್ರಶಸ್ತಿಗಳನ್ನು ಸುದೀಪ್ ನಿರಾಕರಿಸುತ್ತಾ ಬಂದಿದ್ದಾರೆ. ಈ ನಿರಾಕರಣೆಯ ಹಿಂದೆ ಅದರದ್ದೇ ಆದ ನೋವಿದೆ ಎಂದು ಹೇಳಲಾಗುತ್ತಿದೆ.
2002ರ ನಂತರ ಕಿಚ್ಚ ಸುದೀಪ್‌ಗೆ ಇದುವರೆಗೂ ರಾಜ್ಯ ಪ್ರಶಸ್ತಿ ಬಂದಿಲ್ಲ. 2004 ರಲ್ಲಿ ರಂಗ SSLC ನಟನೆಗೆ ರಾಜ್ಯ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಕಿಚ್ಚ ಅವರಿಗೆ ಅದಕ್ಕೂ ಪ್ರಶಸ್ತಿ ಸಿಕ್ಕಿರಲಿಲ್ಲ. 2004 ರಲ್ಲಿ ಕಿಚ್ಚನಿಗೆ ರಾಜ್ಯ ಪ್ರಶಸ್ತಿ ಬಂದಿರಲಿಲ್ಲ. ಹೊಸ ನಟನಿಗೆ 2004 ರಲ್ಲಿ ರಾಜ್ಯ ಪ್ರಶಸ್ತಿ ಕೊಡಲಾಗಿತ್ತು.
ಇದಾದ ನಂತರ ರಾಜ್ಯ ಪ್ರಶಸ್ತಿ ಮೇಲಿನ ನಂಬಿಕೆ ಕಳೆದು ಕೊಂಡಿರುವ ಕಿಚ್ಚ ಅವರು ರಾಜ್ಯ ಪ್ರಶಸ್ತಿ ಪಡೆಯ ಬೇಕಾದರೆ ಲಾಭಿ ಮಾಡಬೇಕು. ಲಾಭಿ ಮಾಡುವ ಪ್ರಶಸ್ತಿಗಳು ನನಗೆ ಬೇಡವೇ ಬೇಡ ಎಂದು ಅವಾರ್ಡ್ ಮೇಲಿನ ನಂಬಿಕೆ ಕಳೆದು ಕೊಂಡಿರುವ ಬಗ್ಗೆ ಅಪ್ತರ ಬಳಿ ನಟ ಹೇಳಿದ್ದಾರೆ ಎನ್ನಲಾಗಿದೆ.
ಪಾತ್ರದಲ್ಲಿ ಕಿಚ್ಚ ಹೇಳಿದ್ದೇನು..?
‘ನನಗೆ ಅತ್ಯುತ್ತಮ ನಟ ವಿಭಾಗದಲ್ಲಿ 2019ರ ರಾಜ್ಯ ಪ್ರಶಸ್ತಿ ಸಿಕ್ಕಿರೋದು ನಿಜಕ್ಕೂ ಒಂದು ಗೌರವದ ವಿಷಯ. ಈ ಗೌರವ ನೀಡಿದ್ದಕ್ಕಾಗಿ ನಾನು ತೀರ್ಪುಗಾರರಿಗೆ ಹಾಗೂ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಆದರೆ ನಾನು ಅನೇಕ ವರ್ಷಗಳಿಂದ ಪ್ರಶಸ್ತಿಗಳನ್ನು ಪಡೆಯೋದನ್ನು ನಿಲ್ಲಿಸಿದ್ದೇನೆ.
ನನ್ನದೇ ಆದ ಕೆಲವು ವೈಯಕ್ತಿಕ ಕಾರಣಗಳಿಂದ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನಟನೆ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅನೇಕ ಕಲಾವಿದರಿದ್ದಾರೆ. ಈ ಪ್ರತಿಷ್ಠಿತ ಮನ್ನಣೆಯನ್ನು ನಾನು ಮೆಚ್ಚುತ್ತೇನೆ. ಆದರೆ ನಾನು ಈ ಪ್ರಶಸ್ತಿಯನ್ನು ಸ್ವೀಕಾರ ಮಾಡೋದಕ್ಕಿಂತ ನನಗಿಂತಲೂ ಅರ್ಹರೊಬ್ಬರು ಪ್ರಶಸ್ತಿ ಪಡೆಯೋದನ್ನು ನೋಡೋದು ನನಗೆ ತುಂಬ ಖುಷಿ ಕೊಡುತ್ತದೆ’ ಎಂದು ನಟ ಕಿಚ್ಚ ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪತ್ರ ಬರೆದು ತಿಳಿಸಿದ್ದಾರೆ.
ಮುಂದುವರೆದು ಕಿಚ್ಚ ಸುದೀಪ್ ‘ಸಿನಿಪ್ರೇಕ್ಷಕರನ್ನು ರಂಜಿಸೋದು ನನ್ನ ಕೆಲಸ. ಇಷ್ಟು ವರ್ಷಗಳಿಂದ ಈ ಕೆಲಸವನ್ನು ಯಾವುದೇ ಪ್ರಶಸ್ತಿ-ಪುರಸ್ಕಾರಗಳ ನಿರೀಕ್ಷೆಯೇ ಇಲ್ಲದೆ ಮಾಡುತ್ತ ಬಂದಿದ್ದೇನೆ. ತೀರ್ಪುಗಾರರ ಈ ನಿರ್ಧಾರವು ಸ್ವಾಗತಾರ್ಹ, ಇದು ನನ್ನನ್ನು ಇನ್ನಷ್ಟು ಹೆಚ್ಚು ಸಿನಿಮಾದಲ್ಲಿ ತೊಡಗಿಸಿಕೊಳ್ಳಲು, ಕೆಲಸ ಮಾಡಲು, ಮುಂದುವರೆಯಲು ಇನ್ನಷ್ಟು ಹೆಚ್ಚಾಗಿ ಪ್ರೇರೇಪಿಸುವುದು ಖಂಡಿತ.
2019ರ ಅತ್ಯುತ್ತಮ ನಟ ಪ್ರಶಸ್ತಿಗೆ ನೀವೆಲ್ಲ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರತಿಯೊಬ್ಬ ತೀರ್ಪುಗಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಈ ನಿರ್ಧಾರದಿಂದ ತೀರ್ಪುಗಾರರು ಹಾಗು ರಾಜ್ಯ ಸರ್ಕಾರಕ್ಕೆ ನೋವಾದರೆ, ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ಆದರೆ, ನೀವು ನನ್ನ ಈ ನಿರ್ಧಾರವನ್ನು ಗೌರವಿಸುತ್ತೀರಿ, ನನ್ನ ಆಯ್ಕೆಯಲ್ಲಿ ನಾನು ಸಾಗಲು ನನ್ನನ್ನು ಬೆಂಬಲಿಸುತ್ತೀರಿ ಎಂದು ನಂಬಿರುವೆ. ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿ ಕೊಡಲು ನಿರ್ಧಾರ ಮಾಡಿದವರಿಗೆ, ರಾಜ್ಯ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ನೋವು ನೀಡಿದ್ದ ಆ ಎರಡು ಘಟನೆಗಳು “
‘ರಂಗ ಎಸ್ಎಸ್ಎಲ್ಸಿ’ (2004) ಮತ್ತು ‘ಮುಸ್ಸಂಜೆ ಮಾತು’ (2008) ಸಿನಿಮಾ ಮಾಡಿದಾಗ ಪ್ರಶಸ್ತಿ ಕಮಿಟಿಯಲ್ಲಿದ್ದವರೇ ಸುದೀಪ್‌ಗೆ ಕರೆ ಮಾಡಿ ನಿಮಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ ಎಂದು ಹೇಳಿದ್ದರಂತೆ. ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಾಗ ಅವಾರ್ಡ್ ಬಂದಿದೆ ಎಂದರೆ ಖುಷಿ ಆಗಿಯೇ ಆಗುತ್ತದೆ. ಹೀಗಾಗಿ ಅವಾರ್ಡ್ ಕಮಿಟಿಯವರ ಮಾತನ್ನು ಕೇಳಿ ಸುದೀಪ್ ಸಂಭ್ರಮಿಸಿದ್ದರಂತೆ.
ಆದರೆ, ರಾಜ್ಯ ಪ್ರಶಸ್ತಿ ಘೋಷಣೆ ಆದಾಗ ಮಾತ್ರ ಅಲ್ಲಿ ಅದು ಬೇರೆ ನಟರ ಪಾಲಾಗಿತ್ತು. ಈ ಎರಡು ಘಟನೆಯಿಂದಾಗಿ ಅವರು ಪ್ರಶಸ್ತಿಗಳನ್ನು ನಿರಾಕರಿಸುತ್ತಲೇ ಬಂದಿದ್ದಾರೆ ಎಂದಿದ್ದಾರೆ. ಈ ಮೊದಲು ‘ಸೈಮಾ ಅವಾರ್ಡ್’ ಸಮಾರಂಭಕ್ಕೆ ಗೆಸ್ಟ್ ಆಗಿ ಹೋಗಿದ್ದರು ಅಷ್ಟೇ. ಅದನ್ನು ಹೊರತುಪಡಿಸಿ ಅವರು ಅವಾರ್ಡ್ ಸ್ವೀಕರಿಸಿಲ್ಲ.
2019ರ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಘೋಷಿಸಿದೆ. ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ಅನುಪಮಾ ಗೌಡ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಈ ಪ್ರಶಸ್ತಿಯು 20 ಸಾವಿರ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಒಳಗೊಂಡಿದೆ.