ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿರುವ ಚಿತ್ರನಟಿ ಕಂಗನಾ ರಣಾವತ್ ಅವರ ಆಯ್ಕೆಯನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಆ. 21ರೊಳಗೆ ಉತ್ತರ ನೀಡುವಂತೆ ಕಂಗನಾ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಹಿಮಾಚಲ ಪ್ರದೇಶದ ಕಿನ್ನೌರ್ ಎಂಬ ಊರಿನ ನಿವಾಸಿ ಲಾಯಕ್ ರಾಮ್ ನೇಗಿ ಎಂಬುವರು ಹಿಮಾಚಲ ಪ್ರದೇಶ ಹೈಕೋರ್ಟ್ ನಲ್ಲಿ ರಣಾವತ್ ಅವರ ಆಯ್ಕೆಯನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.
ಲೋಕಸಭಾ ಚುನಾವಣೆಯಲ್ಲಿ ನೇಗಿ ಅವರು ಮಂಡಿ ಲೋಕಸಭಾ ಚುನಾವಣೆಯಲ್ಲಿ ನಿಲ್ಲಲು ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಯನ್ನು ಸೂಕ್ತ ದಾಖಲೆಗಳಿಲ್ಲದ ಕಾರಣಕ್ಕಾಗಿ ತಿರಸ್ಕರಿಸಲಾಗಿತ್ತು. ಹೈಕೋರ್ಟ್ ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಇದನ್ನೇ ಉಲ್ಲೇಖಿಸಿರುವ ನೇಗಿ, ತಮ್ಮ ನಾಮಪತ್ರವನ್ನು ತಿರಸ್ಕರಿಸಿದ ರೀತಿ ಸರಿಯಾಗಿರಲಿಲ್ಲ ಹಾಗೂ ಸಮರ್ಥನೀಯವಾಗಿಲ್ಲ. ಈ ವಿಚಾರದಲ್ಲಿ ಚುನಾವಣಾಧಿಕಾರಿಯ ನಡೆಯೂ ವಿಚಿತ್ರವಾಗಿದ್ದು ಆಕ್ಷೇಪಾರ್ಹವಾಗಿದೆ. ಹಾಗಾಗಿ, ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾರವರ ಆಯ್ಕೆಯನ್ನು ರದ್ದುಗೊಳಿಸಬೇಕು ಎಂದು ಅವರು ಕೋರಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಂಗನಾ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಕಾಂಗ್ರೆಸ್ಸಿನ ವಿಕ್ರಮಾದಿತ್ಯ ಸಿಂಗ್ ಅವರನ್ನು 74,755 ಮತಗಳ ಅಂತರದಿಂದ ಪರಾಭವಗೊಳಿಸಿ ಜಯಶಾಲಿಯಾಗಿದ್ದರು. ಕಂಗನಾ ಅವರಿಗೆ 5,37,002 ಮತಗಳು ಬಂದಿದ್ದರೆ, ವಿಕ್ರಮಾದಿತ್ಯ ಸಿಂಗ್ ಅವರಿಗೆ 4,62,267 ಮತಗಳು ಬಂದಿದ್ದವು.

