ಚಿಕ್ಕೋಡಿ, ಜನವರಿ 7: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಜೀವನಾಡಿಯಂತಿರುವ ಹಿಪ್ಪರಗಿ ಬ್ಯಾರೇಜ್‌ನಲ್ಲಿ ತಾಂತ್ರಿಕ ದೋಷದಿಂದ ಕ್ರಸ್ಟ್ ಗೇಟ್ ಸಂಖ್ಯೆ 22 ಮುರಿದುಬಿದ್ದ ಪರಿಣಾಮ ಭಾರಿ ಪ್ರಮಾಣದ ನೀರು ಪೋಲಾಗುತ್ತಿರುವ ಘಟನೆ ಸಂಭವಿಸಿದೆ. ಬ್ಯಾರೇಜ್‌ನಿಂದ ಹೊರ ಹರಿಯುತ್ತಿರುವ ನೀರು ಕೃಷ್ಣಾ ನದಿಯ ಮೂಲಕ ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನತ್ತ ಅತೀವೇಗದಲ್ಲಿ ಹರಿಯುತ್ತಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿರುವ ಹಿಪ್ಪರಗಿ ಬ್ಯಾರೇಜ್‌ನ ಈ ಗೇಟ್ ತಾತ್ಕಾಲಿಕವಾಗಿ ದುರಸ್ತಿ ಸಾಧ್ಯವಾಗದಷ್ಟು ಗಂಭೀರವಾಗಿ ಹಾನಿಗೊಳಗಾಗಿದೆ. ಇದರ ಪರಿಣಾಮ ಸಾವಿರಾರು ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗುವ ಆತಂಕ ಎದುರಾಗಿದೆ.
ಮುಂಗಾರು ಹಂಗಾಮಿನಲ್ಲಿ ಸಂಗ್ರಹಿಸಿದ ನೀರನ್ನು ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸಬೇಕಾದ ಅತ್ಯಂತ ಪ್ರಮುಖ ಸಮಯದಲ್ಲೇ ಈ ಅವಘಡ ಸಂಭವಿಸಿರುವುದು ರೈತರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ. ನೀರಿನ ಮಟ್ಟ ಕುಸಿದರೆ ಮುಂದಿನ ದಿನಗಳಲ್ಲಿ ಕೃಷಿ ಕಾರ್ಯಗಳಿಗೆ ಗಂಭೀರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ನದಿ ತೀರದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳಾದ ನಾಗರಾಜ್ ಹಾಗೂ ಪ್ರವೀಣ್ ಹುಣಸಿಕಟ್ಟಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ತಾಂತ್ರಿಕ ತಂಡದ ಸಹಕಾರದೊಂದಿಗೆ ತುರ್ತು ಕಾರ್ಯಾಚರಣೆ ನಡೆಸಿ ನೀರು ಪೋಲಾಗುವುದನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ದುರಸ್ತಿ ಕಾರ್ಯಕ್ಕಾಗಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಲಾಗಿದ್ದು, ಮುಳುಗು ತಜ್ಞರ ಸಹಕಾರದೊಂದಿಗೆ ಕಾರ್ಯಾಚರಣೆ ಮುಂದುವರೆದಿದೆ.

