ಬೆಂಗಳೂರು: ಕರ್ನಾಟಕ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು, ತಂಬಾಕು ಅಥವಾ ಗುಟ್ಕಾ ಉಗುಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ನಿಯಮ ಉಲ್ಲಂಘಿಸಿದವರ ಮೇಲೆ ₹1,000 ದಂಡ ವಿಧಿಸಲಾಗುವುದು. ಇದರೊಂದಿಗೆ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್, ಬೀಡಿ ಮತ್ತು ಇತರ ತಂಬಾಕು ಉತ್ಪನ್ನಗಳ ಮಾರಾಟವನ್ನೂ ನಿಷೇಧಿಸಲಾಗಿದೆ.
ಈ ಹೊಸ ನಿಯಮಗಳು ಸಾರ್ವಜನಿಕ ಆರೋಗ್ಯವನ್ನು ಸುರಕ್ಷಿತವಾಗಿಡಲು ಮತ್ತು ಯುವ ಪೀಳಿಗೆಯನ್ನು ತಂಬಾಕು ಸೇವನೆಯಿಂದ ದೂರವಿಡಲು ರಚಿಸಲಾಗಿದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯರೋಗಗಳು ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ, ಸರ್ಕಾರವು ಈ ಕ್ರಮಗಳನ್ನು ಕೈಗೊಂಡಿದೆ.
ಕರ್ನಾಟಕ ಸರ್ಕಾರವು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ-ವಾಣಿಜ್ಯ) ತಿದ್ದುಪಡಿ ಕಾಯ್ದೆ-2024 ಅನ್ನು ಜಾರಿಗೆ ತಂದಿದೆ. ಈ ಕಾಯ್ದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆ ದೊರಕಿದ್ದು, ಮೇ 23ರಂದೇ ಇದನ್ನು ಅಂಗೀಕರಿಸಲಾಗಿತ್ತು. ಈಗ ಶುಕ್ರವಾರ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
ರಸ್ತೆಗಳು, ಬಸ್ ನಿಲ್ದಾಣಗಳು, ಉದ್ಯಾನಗಳು, ರೆಸ್ಟೋರೆಂಟ್ಗಳು, ಶಾಪಿಂಗ್ ಮಾಲ್ಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು ಅಥವಾ ತಂಬಾಕು ಉತ್ಪನ್ನಗಳನ್ನು ಉಪಯೋಗಿಸುವುದು ಕಾನೂನುಬಾಹಿರ.ಉಲ್ಲಂಘಿಸಿದವರಿಗೆ ₹1,000 ದಂಡ ವಿಧಿಸಲಾಗುವುದು.
ಬಾರ್, ಪಬ್, ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಹುಕ್ಕಾ ಸೇವನೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಈ ನಿಯಮ ಉಲ್ಲಂಘಿಸಿದಲ್ಲಿ ₹50,000 ರಿಂದ ₹1 ಲಕ್ಷ ದಂಡ ಮತ್ತು 1 ರಿಂದ 3 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಬಹುದು.
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್, ಬೀಡಿ, ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.ಈ ನಿಯಮ ಉಲ್ಲಂಘಿಸಿದ ಅಂಗಡಿಗಳು ಮತ್ತು ವ್ಯಕ್ತಿಗಳ ಮೇಲೆ ಕಟ್ಟುನಿಟ್ಟು ಕ್ರಮ ತೆಗೆದುಕೊಳ್ಳಲಾಗುವುದು.

