ಹಾವೇರಿ, ಡಿಸೆಂಬರ್ 29: ರಾಜ್ಯ ರಾಜಕೀಯದ ಬಗ್ಗೆ ಇತ್ತೀಚೆಗೆ ಅಚ್ಚರಿ ಮೂಡಿಸುವ ಭವಿಷ್ಯಗಳನ್ನು ನುಡಿದಿದ್ದ ಕೋಡಿಮಠದ ಶ್ರೀಗಳು, ಮುಂದೆ ಸಂಭವಿಸಬಹುದಾದ ಘಟನೆಗಳ ಕುರಿತು ಮತ್ತೊಮ್ಮೆ ಶಾಕಿಂಗ್ ಭವಿಷ್ಯ ಹೇಳಿದ್ದಾರೆ. ಹಾವೇರಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಡಿಸೆಂಬರ್ ತಿಂಗಳ ನಂತರ ರಾಜ್ಯದಲ್ಲಿ ಸಾವು–ನೋವು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
“ಅಂಬಲಿ ಹಳಸೀತು, ಕಂಬಳಿ ಹಾಸೀತು ಎಂದು ನಾನು ಹೇಳಿದ್ದೆ. ಕೈಲಾಸದಲ್ಲಿ ಕೈಪೂಜೆ ನಡೆಯುತ್ತದೆ ಎಂದೂ ಹೇಳಿದ್ದೆ. ಹಕ್ಕ–ಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಉಳಿಸಿದರು, ಸಂಗೊಳ್ಳಿ ರಾಯಣ್ಣ ಕಿತ್ತೂರು ಸಾಮ್ರಾಜ್ಯವನ್ನು ರಕ್ಷಿಸಿದರು. ಕುರುಬ ಸಮಾಜದವರು ಪ್ರಕೃತಿಯಲ್ಲೇ ಭವಿಷ್ಯವನ್ನು ಕಂಡವರು. ಹಾಲುಮತ ಸಮಾಜ ದೈವೀ ಬಲ ಹೊಂದಿರುವ ಪುರಾತನ ಮತ. ಹಾಲುಮತದಿಂದ ಅಧಿಕಾರ ಬಿಡಿಸಿಕೊಳ್ಳುವುದು ಸುಲಭವಲ್ಲ” ಎಂದು ಸ್ವಾಮೀಜಿ ಹೇಳಿದರು.
ಭಾರತೀಯ ಪರಂಪರೆಯಲ್ಲಿ ಜ್ಯೋತಿಷ್ಯಕ್ಕೆ ಮಹತ್ವದ ಸ್ಥಾನವಿದೆ ಎಂದು ತಿಳಿಸಿದ ಅವರು, “ಹಿಂದೆ ವ್ಯಾಪಾರಸ್ಥರು, ಸಂಕ್ರಾಂತಿ ಫಲ ಕೇಳುತ್ತಿದ್ದರು. ಉದ್ಯಮಿಗಳು ಹಾಗೂ ರಾಜಮಹಾರಾಜರು ಸಂಕ್ರಾಂತಿ ಭವಿಷ್ಯವನ್ನು ನಂಬುತ್ತಿದ್ದರು. ಬಜೆಟ್ ಮುಗಿಯುವವರೆಗೂ ಮುಖ್ಯಮಂತ್ರಿ ಕುರ್ಚಿಗೆ ಯಾವುದೇ ತೊಂದರೆ ಇಲ್ಲ. ಬಜೆಟ್ ಬಳಿಕ ಅವರು ಸ್ವಯಂವಾಗಿ ಸ್ಥಾನ ಬಿಡಿಸಿದರೆ, ಬೇರೆಯವರಿಗೆ ಮುಖ್ಯಮಂತ್ರಿ ಆಗುವ ಯೋಗ ಇದೆ” ಎಂದು ಹೇಳಿದರು.
ಇದೇ ವೇಳೆ ಮತ್ತೊಂದು ಅರ್ಥಪೂರ್ಣ ಸಂಕೇತವನ್ನು ಉಲ್ಲೇಖಿಸಿದ ಸ್ವಾಮೀಜಿ, “ಶಿವನ ಮಲ್ಲಿಗೆಯ ಮುಡಿಯ ಹೂವು ಬಲಪಾದದಿಂದ ಬಿದ್ದಿದೆ. ಎರಡು ಹೂವುಗಳು ಶಿವನ ಪಾದ ಸೇರುತ್ತವೆ. ಯುಗಾದಿ ಕಳೆದ ಬಳಿಕ ಸಾವು–ನೋವು ಇನ್ನಷ್ಟು ಹೆಚ್ಚಾಗಲಿದೆ. ಹಿಂದೆ ಅರಸರ ಅರಮನೆಗೆ ಕಾರ್ಮೋಡ ಕವಿದೀತು ಎಂದು ಹೇಳಿದ್ದೆ. ಚೀನಾದಲ್ಲಿ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತು. ಪ್ರಧಾನಮಂತ್ರಿಗಳು ಉಳಿದಿದ್ದೇ ಹೆಚ್ಚು. 2026ಕ್ಕೆ ಇದು ಇನ್ನೂ ಹೆಚ್ಚಾಗುತ್ತದೆ. ಯುಗಾದಿ ಕಳೆಯಲಿ” ಎಂದು ಭವಿಷ್ಯ ನುಡಿದರು.

