ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಒಳಜಗಳ ತೀವ್ರವಾಗುತ್ತಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷದೊಳಗೆ ‘ಕುದುರೆ ವ್ಯಾಪಾರ’ ನಡೆಯುತ್ತಿದೆ ಎಂದು ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು ಶಾಸಕರಾದ ವಿನಯ್ ಕುಲಕರ್ಣಿ ಮತ್ತು ವೀರೇಂದ್ರ ಪಪ್ಪಿ ಅವರ ಬೆಂಬಲ ಕಲೆಹಾಕಲು ಸಹಿ ಮಾಡಿಸಿಕೊಂಡಿರುವುದು ಈ ವ್ಯಾಪಾರದ ಭಾಗವೆಯೇ ಎಂಬ ಪ್ರಶ್ನೆ ಎತ್ತಿದರು. “ಮೊದಲು ಕಾಂಗ್ರೆಸ್ ಬೇರೆ ಪಕ್ಷದವರನ್ನು ಕಿತ್ತುಕೊಂಡು ಕುದುರೆ ವ್ಯಾಪಾರ ಮಾಡುತ್ತಿತ್ತು, ಈಗ ತಮ್ಮದೇ ಪಕ್ಷದೊಳಗೆ ಇದೇ ರೀತಿ ನಡೆಯುತ್ತಿದೆ” ಎಂದು ನಾರಾಯಣಸ್ವಾಮಿ ಟೀಕಿಸಿದರು.
50 ಕೋಟಿ + ಫ್ಲಾಟ್ + ಕಾರ್ ಆಫರ್?
“ಕಾಂಗ್ರೆಸ್‌ನಲ್ಲಿ ಕೆಲ ಶಾಸಕರು 75 ಕೋಟಿ, 100 ಕೋಟಿ ಬೇಡಿಕೆ ಇಟ್ಟಿದ್ದಾರೆ. ಒಬ್ಬೊಬ್ಬ ಶಾಸಕರಿಗೆ 50 ಕೋಟಿ, ಒಂದು ಫ್ಲಾಟ್ ಮತ್ತು ಫಾರ್ಚೂನರ್ ಕಾರು ಕೊಡುವ ಆಫರ್ ನೀಡಲಾಗಿದೆ” ಎಂದು ಅವರು ಗಂಭೀರ ಆರೋಪ ಮಾಡಿದರು. ಈ ಸಂಬಂಧ ಇಡಿಗೆ ದೂರು ನೀಡುವುದಾಗಿ ಹೇಳಿದರು.
ಸುರ್ಜೇವಾಲಾಗೆ 200 ಕೋಟಿ ಪಾವತಿ?
ಇನ್ನಷ್ಟು ತೀವ್ರ ಆರೋಪಗಳನ್ನು ಮುಂದುವರಿಸಿದ ಅವರು, “ರಣದೀಪ್ ಸುರ್ಜೇವಾಲಾ ಈಗಾಗಲೇ ಡೀಲ್ ಮಾಡಿಕೊಂಡಿದ್ದಾರೆ. ಮಂತ್ರಿ ಸ್ಥಾನಕ್ಕಾಗಿ 200 ಕೋಟಿ ಬೇಡಿಕೆ ಇಟ್ಟಿದ್ದು, ವೀರೇಂದ್ರ ಪಪ್ಪಿ ಜೈಲು ಸೇರುವ ಮೊದಲು 200 ಕೋಟಿ ಅಡ್ವಾನ್ಸ್ ಪಾವತಿಸಿರುವ ಮಾಹಿತಿ ಇದೆ. ಮೊದಲು ಸುರ್ಜೇವಾಲಾರನ್ನು ಬಂಧಿಸಿ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು. ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ರಾಜಕೀಯ ಗದ್ದಲದ ನಡುವೆ ಈ ಆರೋಪಗಳು ಬಿರುಸಿನ ಚರ್ಚೆಗೆ ಕಾರಣವಾಗಿವೆ.

