ಹಾಸನ : ಪತಿ–ಅತ್ತೆಯ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಹಾಸನ ಜಿಲ್ಲೆ ಬೆಟ್ಟಸೋಗೆಯಲ್ಲಿ ನಡೆದಿದೆ. ಹಸುಗೂಸಿನೊಂದಿಗೆ ಕಾವೇರಿ ನದಿಗೆ ಹಾರಿ ಮಹಾದೇವಿ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರ ಮೃತದೇಹಗಳು ನದಿಯಲ್ಲಿ ಪತ್ತೆಯಾಗಿವೆ.
ಮಹಾದೇವಿ ತನ್ನ ಮೊದಲ ಪತಿಯೊಂದಿಗೆ ವಿಚ್ಛೇದನ ಪಡೆದ ನಂತರ ಕುಮಾರ್ ಎಂಬುವವರನ್ನು 2ನೇ ಬಾರಿ ಮದುವೆಯಾಗಿದ್ದರು.ಮದುವೆಯ ನಂತರ ಪತಿಯಿಂದ ನಿರಂತರವಾಗಿ ಶೀಲದ ಬಗ್ಗೆ ಅನುಮಾನ ಹಾಗೂ ಅತ್ತೆಯಿಂದ ಕಿರುಕುಳ ಅನುಭವಿಸುತ್ತಿದ್ದಾಳೆ ಎಂದು ಆರೋಪ.
ಆತ್ಮಹತ್ಯೆಗೆ ಮುನ್ನ ಮಾಡಿದ ವಿಡಿಯೋ
ಸಾಯುವ ಮುನ್ನ ಮಹಾದೇವಿ ತಮ್ಮ ನೋವನ್ನು ಹಂಚಿಕೊಂಡಿರುವ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ಅವರು ಹೇಳಿರುವುದೇನಂದರೆ—
“ನನ್ನ ಶೀಲದ ಬಗ್ಗೆ ಪದೇ ಪದೇ ಅನುಮಾನ ಮಾಡುತ್ತಾರೆ.” “ಪತಿಯ ತಾಯಿ ಕೂಡ ಹಿಂಸೆ ಕೊಡುತ್ತಿದ್ದಾರೆ.” “ಪೊಲೀಸರು ಎಷ್ಟೇ ಬುದ್ಧಿ ಹೇಳಿದರೂ ಗಂಡ ಕೇಳಿಸಿಕೊಂಡಿಲ್ಲ.” “ನನ್ನ ಸಾವಿನಿಂದ ಅವನಿಗೆ ನೆಮ್ಮದಿ ಸಿಗುವುದಾದರೆ ಸಿಗಲಿ.” ಈ ವಿಡಿಯೋ ರೆಕಾರ್ಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಮಗುವನ್ನು ಹಿಡಿದುಕೊಂಡೇ ಕಾವೇರಿ ನದಿಗೆ ಹಾರಿರುವುದು ಶಂಕಿಸಲಾಗಿದೆ.
ಪೊಲೀಸ್ ತನಿಖೆ ಮುಂದುವರಿಕೆ
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ಪತಿ ಕುಮಾರ್ ಹಾಗೂ ಅತ್ತೆಯ ವಿರುದ್ಧ ಕಿರುಕುಳ ಮತ್ತು ಪ್ರೇರಣೆ ಆರೋಪಗಳ ಕುರಿತು ತನಿಖೆ ಆರಂಭಿಸಿದ್ದಾರೆ.

