ಬೆಂಗಳೂರು:ನಾನು ಎಷ್ಟು ದಿನ ಸಚಿವನಾಗಿ ಇರುತ್ತೇನೆ ಎಂಬ ಅಚ್ಚರಿಯ ಹೇಳಿಕೆ ನೀಡುವ ಮೂಲಕ ಸಚಿವ ಸಂಪುಟ ಪುನಾರಚನೆಯ ಸುಳಿವು ನೀಡಿದ್ದಾರೆ ಸಚಿವ ಜಮೀರ್ ಅಹ್ಮದ್.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಜೀವಂತವಾಗಿ ಇರ್ತಿನೋ ಇಲ್ವೋ ಗೊತ್ತಿಲ್ಲ. ಯಾಕಂದ್ರೆ ದೇವರು ಹಣೆ ಬರಹ ಬರೆದಿರ್ತಾನೆ. ಮುಂದೆ ನಾನು ಮಂತ್ರಿ ಆಗ್ತಿನೋ, ಇರ್ತಿನೋ ಗೊತ್ತಿಲ್ಲ. ಈಗ ನನ್ನನ್ನ ಅಲ್ಪಸಂಖ್ಯಾತ ಸಚಿವರಾಗಿ ಮಾಡಿದ್ದಾರೆ. ಮುಂದಿನ ನಾಲ್ಕು ವರ್ಷ ನಮ್ಮ ಸರ್ಕಾರ ಇರುತ್ತದೆ. ನಾನೇ ಅಲ್ಪ ಸಂಖ್ಯಾತ ಮಂತ್ರಿ ಆಗಿ ಇರ್ತಿನಿ ಅನ್ನೋ ವಿಶ್ವಾಸ ಇದೆ ಎಂದರು.
ಈ ಮೂಲಕ ಸಂಪುಟ ಸರ್ಜರಿ ಹಾಗೂ ಖಾತೆ ಬದಲಾವಣೆ ವಿಚಾರಕ್ಕೆ ಪುಷ್ಟಿಯನ್ನು ಸಚಿವ ಜಮೀರ್ ಹೇಳಿಕೆ ನೀಡಿದೆ. ಸಂಪುಟ ಪುನಾರಚನೆ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೊಸದಿಲ್ಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ಬಳಿ ವಿವಿಧ ಸುತ್ತಿನ ಮಾತುಕತೆಗಳನ್ನು ನಡೆಸಲಿದ್ದಾರೆ.
ಲೋಕಸಭಾ ಚುನಾವಣೆಯ ಬಳಿಕ ಸಚಿವ ಸಂಪುಟ ಪುನಾರಚನೆ ಆಗಬೇಕು, ಅವಕಾಶ ಸಿಗದ ಸಮರ್ಥರಿಗೆ ಅವಕಾಶ ನೀಡಬೇಕು ಎಂಬ ಕೂಗು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಈ ಬಾರಿ ಸಚಿವ ಸಂಪುಟ ಪುನಾರಚನೆ ಆದರೆ ಯಾರೆಲ್ಲಾ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಬಗ್ಗೆ ಕುತೂಹಲ ಮನೆ ಮಾಡಿದೆ.