ನವದೆಹಲಿ, ಫೆ.1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ದೇಶದ ಆರ್ಥಿಕತೆ, ಕೈಗಾರಿಕೆ, ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ಬಜೆಟ್‌ನಲ್ಲಿ ಮದ್ಯ, ಸಿಗರೇಟ್, ಶೂಗಳು, ಜವಳಿ ರಫ್ತು ಉತ್ಪನ್ನಗಳು ಹಾಗೂ ಬ್ಯಾಟರಿಗಳ ಬೆಲೆ ಇಳಿಕೆಯಾಗಲಿದ್ದು, ಸಾಮಾನ್ಯ ಜನರಿಗೆ ನೇರ ಲಾಭ ದೊರೆಯಲಿದೆ ಎಂದು ಸಚಿವೆ ತಿಳಿಸಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಜುಲೈ 31ರವರೆಗೆ ಅವಕಾಶ ನೀಡಲಾಗಿದ್ದು, ಈ ಹಿಂದೆ ಇದ್ದ ಡಿಸೆಂಬರ್ 31 ಗಡುವನ್ನು ಬದಲಿಸಲಾಗಿದೆ.
ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿರುವ ಸರ್ಕಾರ, ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯ ಯೋಜನೆ ಹಾಗೂ ಒನ್ ಪ್ರೊಡಕ್ಟ್ ಒನ್ ಸ್ಟೇಟ್ ಯೋಜನೆ ಆರಂಭಿಸುವುದಾಗಿ ಘೋಷಿಸಿದೆ. ಆತ್ಮನಿರ್ಭರ ಭಾರತಕ್ಕಾಗಿ ₹2,000 ಕೋಟಿ ಮೀಸಲಿಡಲಾಗಿದ್ದು, ಕ್ರೆಡಿಟ್ ಗ್ಯಾರಂಟಿ ಸಪೋರ್ಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗೆ ಸಾಲ ನೆರವು ಘೋಷಣೆ ಮಾಡಲಾಗಿದ್ದು, ಕೈಗಾರಿಕಾ ವಲಯಕ್ಕೆ ಉತ್ತೇಜನ ನೀಡಲು ಕೇಂದ್ರೀಯ ಔಷಧಿ ನಿಯಂತ್ರಣ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆ ಬಲಪಡಿಸಲು ಬಯೋಫಾರ್ಮ್ ಶಕ್ತಿ ಯೋಜನೆ ಘೋಷಿಸಲಾಗಿದೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ ಎಂದು ಸಚಿವೆ ಹೇಳಿದರು.
AI ಮಿಷನ್ ಮೂಲಕ ದೇಶದಲ್ಲಿ ದೊಡ್ಡ ಕ್ರಾಂತಿ ನಡೆಯಲಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆರೋಗ್ಯ ಕ್ಷೇತ್ರದಲ್ಲಿ ಹೊಸದಾಗಿ 3 ಏಮ್ಸ್ ಆಸ್ಪತ್ರೆಗಳ ನಿರ್ಮಾಣ, ಮಧುಮೇಹ ಹಾಗೂ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ, ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ಹಾಸ್ಟೆಲ್ ನಿರ್ಮಾಣದ ಘೋಷಣೆಯೂ ಮಾಡಲಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಖೇಲೋ ಇಂಡಿಯಾ ಮಿಷನ್ ಆರಂಭಿಸಲಾಗುವುದು. ತೆಂಗು ಕೃಷಿ ಅಭಿವೃದ್ಧಿಗೆ ಹೊಸ ಯೋಜನೆ ಘೋಷಿಸಲಾಗಿದ್ದು, ತೆಂಗಿನಕಾಯಿ ಬೆಳೆ, ಸಂಸ್ಕರಣೆ ಮತ್ತು ರಫ್ತಿಗೆ ವಿಶೇಷ ಒತ್ತು ನೀಡಲಾಗುವುದು. ವಿದೇಶಿ ಹೂಡಿಕೆದಾರರಿಗೆ ಅನುಕೂಲ ಕಲ್ಪಿಸಿ, ಭಾರತದಲ್ಲಿ ಹೂಡಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮಹಿಳೆಯರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ‘SHE ಮಾರ್ಟ್’ ಮಾರುಕಟ್ಟೆ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.
ಏಪ್ರಿಲ್‌ನಿಂದ ನೂತನ ಐಟಿ ಕಾಯ್ದೆ ಜಾರಿಗೆ ಬರಲಿದ್ದು, ವಿದೇಶ ಯಾತ್ರೆಯ ವೆಚ್ಚ ಇಳಿಕೆಯಾಗಲಿದೆ ಎಂದು ಘೋಷಿಸಲಾಗಿದೆ. ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31ರವರೆಗೆ ಅವಕಾಶ ನೀಡಲಾಗಿದ್ದು, ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶೇ.100ರಷ್ಟು ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮೋಟಾರು ಅಪಘಾತ ಕ್ಲೇಮ್‌ಗಳಿಗೆ ತೆರಿಗೆ ವಿಧಿಸಲಾಗುವುದಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಶೇ.2ರಷ್ಟು TCS ಕಡಿತ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

