ನವದೆಹಲಿ : ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ವಿಪಕ್ಷಗಳ ಇಂಡಿಯ ಬ್ಲಾಕ್‌ನ ಅಭ್ಯರ್ಥಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಘೋಷಿಸಿದ್ದಾರೆ.
ಈಗಾಗಲೇ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ಅವರನ್ನು ಎನ್‌ಡಿಎ ಬಣದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಅವರನ್ನು ಬೆಂಬಲಿಸುವಂತೆ ಪ್ರತಿಪಕ್ಷಗಳನ್ನು ಒತ್ತಾಯಿಸಿದರೂ ಇಂಡಿಯ ಬ್ಲಾಕ್ ಇಂದು ತನ್ನದೇ ಆದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಮೂಲಗಳ ಪ್ರಕಾರ, ಆಂಧ್ರಪ್ರದೇಶದಲ್ಲಿ ಎನ್‌ಡಿಎ ಮಿತ್ರಪಕ್ಷಗಳಾದ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಪವನ್ ಕಲ್ಯಾಣ್ ಅವರ ಜನಸೇನಾ ಮೇಲೆ ಒತ್ತಡ ಹೇರಲು ವಿರೋಧ ಪಕ್ಷವು ಆಂಧ್ರಪ್ರದೇಶ ಮೂಲದ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರನ್ನು ಆಯ್ಕೆ ಮಾಡಿದೆ.
ಎನ್‌ಡಿಎ ಅಭ್ಯರ್ಥಿಯ ಆಯ್ಕೆಯ ವಿಷಯದಲ್ಲಿ ಈಗಾಗಲೇ ತಮ್ಮ ಆಯ್ಕೆಗೂ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದ ಬಿಆರ್‌ಎಸ್ ಮತ್ತು ವೈಎಸ್‌ಆರ್‌ಸಿಪಿಯಂತಹ ಇತರ ತೆಲುಗು ಪಕ್ಷಗಳು ಇಂಡಿಯ ಬ್ಲಾಕ್‌ನ ಈ ಅಭ್ಯರ್ಥಿಯ ಘೋಷಣೆಯಿಂದ ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಬಹುದು ಎಂಬ ನಿರೀಕ್ಷೆ ವಿಪಕ್ಷಗಳದ್ದು ಎನ್ನಲಾಗಿದೆ.

