ಕೊಲಂಬೊ, ಫೆ.15: ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್‌ನಲ್ಲಿ ಪರಂಪರೆಯ ಎದುರಾಳಿ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದು, 61 ರನ್‌ಗಳ ಭಾರೀ ಅಂತರದಿಂದ ನಿರಾಯಾಸ ಜಯ ಸಾಧಿಸಿದೆ. ಕೊಲಂಬೊದ ಆರ್. ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ 27ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಅಭಿಷೇಕ್ ಶರ್ಮಾ ಮೊದಲ ಎಸೆತದಲ್ಲೇ ಔಟಾಗಿ ನಿರ್ಗಮಿಸಿದರು. ಆದರೆ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಬಲ ತುಂಬಿದರು. ತಿಲಕ್ ವರ್ಮಾ ಜೊತೆ ಎರಡನೇ ವಿಕೆಟ್‌ಗೆ 87 ರನ್‌ಗಳ ಜೊತೆಯಾಟ ಕಟ್ಟಿದ ಅವರು, 40 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 77 ರನ್‌ಗಳನ್ನು ಚಚ್ಚಿ ಮಿಂಚಿದರು.
ನಂತರ ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಕುಸಿತ ಕಂಡರೂ ಸೂರ್ಯಕುಮಾರ್ ಯಾದವ್ (33), ಶಿವಂ ದುಬೆ (27) ಮತ್ತು ರಿಂಕು ಸಿಂಗ್ ಅವರ ಕೊಡುಗೆಯಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.
175 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲೇ ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿತು. ಶಾಹಿಬ್ಜಾದ ಫರ್ಹಾನ್ ಡಕೌಟ್ ಆಗಿ ಹಾರ್ದಿಕ್ ಪಾಂಡ್ಯಗೆ ಬಲಿಯಾದರು. ಸೈಮ್ ಅಯ್ಯೂಬ್ (6), ಸಲ್ಮಾನ್ ಅಲಿ ಆಘಾ (4), ಬಾಬರ್ ಅಜಾಮ್ (5), ಶದಾಬ್ ಖಾನ್ (14), ಮೊಹಮ್ಮದ್ ನವಾಜ್ (4) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.
ಉಸ್ಮಾನ್ ಖಾನ್ (44) ಮತ್ತು ಶಹೀನ್ ಆಫ್ರಿದಿ (ಅಜೇಯ 23) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ವಿಫಲರಾದರು. ಪಾಕಿಸ್ತಾನ ತಂಡ 114 ರನ್‌ಗಳಿಗೆ ಆಲೌಟ್ ಆಗಿ 61 ರನ್‌ಗಳ ಅಂತರದಲ್ಲಿ ಸೋಲು ಕಂಡಿತು.
ಭಾರತದ ಪರ ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಈ ಗೆಲುವಿನೊಂದಿಗೆ ಭಾರತ ಸೂಪರ್ 8 ಹಂತಕ್ಕೆ ಭದ್ರವಾಗಿ ಅರ್ಹತೆ ಪಡೆದಿದೆ.

