ನವದೆಹಲಿ : ಫೆ. 19 ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆತಿಥೇಯ ರಾಷ್ಟ್ರ ಪಾಕಿಸ್ತಾನದ ಹೆಸರನ್ನು ತಮ್ಮ ಜೆರ್ಸಿಯಲ್ಲಿ ನಮೂದಿಸಲು ಭಾರತ ತಂಡ ನಿರಾಕರಿಸಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಐಸಿಸಿ ನಿಯಮಗಳ ಅನುಸಾರ ಭಾರತೀಯ ಆಟಗಾರರ ಜರ್ಸಿ ಮೇಲೆ ಆತಿಥೇಯ ದೇಶದ ಹೆಸರು ಮತ್ತು ಪಂದ್ಯಾವಳಿಯ ವರ್ಷವನ್ನು ಪಂದ್ಯಾವಳಿಯ ಹೆಸರಿನೊಂದಿಗೆ ನಮೂದಿಸುವುದಾಗಿ ಬಿಸಿಸಿಐ ಸ್ಪಷ್ಟಪಡಿಸಿದೆ. ಈ ಮೂಲಕ ಬಿಸಿಸಿಐ ವದಂತಿಗಳಿಗೆ ತೆರೆ ಎಳೆದಿದೆ.
ಐಸಿಸಿ ನಿಯಮಗಳ ಪ್ರಕಾರ, ಐಸಿಸಿ ಬ್ಯಾನರ್ ಅಡಿಯಲ್ಲಿ ನಡೆಯುವ ಎಲ್ಲಾ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ತಮ್ಮ ಜೆರ್ಸಿಯಲ್ಲಿ ಆತಿಥೇಯ ದೇಶದ ಹೆಸರು ಮತ್ತು ಪಂದ್ಯಾವಳಿಯ ವರ್ಷವನ್ನು ಪಂದ್ಯಾವಳಿಯ ಹೆಸರಿನೊಂದಿಗೆ ನಮೂದಿಸುವುದು ಕಡ್ಡಾಯವಾಗಿದೆ.
ಬಿಸಿಸಿಐನ ಹೊಸ ಕಾರ್ಯದರ್ಶಿ ದೇವ್‌ಜಿತ್ ಸೈಕಿಯಾ ಅವರು ಐಸಿಸಿಯ ಪ್ರತಿಯೊಂದು ನಿಯಮವನ್ನು ಬಿಸಿಸಿಐ ಅನುಸರಿಸಲಿದೆ ಎಂದು ಖಚಿತಪಡಿಸಿದ್ದಾರೆ. ಅಂದರೆ ಈ ಟೂರ್ನಿಯ ಆತಿಥೇಯ ಪಾಕಿಸ್ತಾನದ ಹೆಸರು ಟೀಂ ಇಂಡಿಯಾದ ಜೆರ್ಸಿ ಮೇಲೆ ಕಾಣಿಸಿಕೊಳ್ಳಲಿದೆ. ಜೊತೆಗೆ ಜೆರ್ಸಿಗೆ ಸಂಬಂಧಿಸಿದ ಪ್ರತಿಯೊಂದು ಐಸಿಸಿ ನಿಯಮವನ್ನು ಅನುಸರಿಸುವುದಾಗಿ ಘೋಷಿಸಿದೆ.
ಸಾಮಾನ್ಯವಾಗಿ, ಐಸಿಸಿ ಪಂದ್ಯಾವಳಿಯನ್ನು ಆಯೋಜಿಸುವ ದೇಶದ ಹೆಸರು ಎಲ್ಲಾ ತಂಡಗಳ ಜೆರ್ಸಿಯ ಮೇಲೆ ನಮೂದಿಸಲೇಬೇಕು. ಆದರೀಗ ಬಿಸಿಸಿಐ, ಪಾಕಿಸ್ತಾನದ ಹೆಸರನ್ನು ತಂಡದ ಜೆರ್ಸಿಯ ಮೇಲೆ ನಮೂದಿಸಲು ತಗಾದೆ ತೆಗೆದಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದ ಬಳಿಕ ಹೊಸ ವಿವಾದವೊಂದು ಹುಟ್ಟಿಕೊಂಡಿತ್ತು. ಪಾಕಿಸ್ತಾನದ ಮಾಧ್ಯಮಗಳು ಈ ವಿಷಯವನ್ನು ಪ್ರಸ್ತಾಪಿಸಿ ಟೀಂ ಇಂಡಿಯಾದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರನ್ನು ಮುದ್ರಿಸಲು ಬಿಸಿಸಿಐ ನಿರಾಕರಿಸಿದೆ ಎಂದು ಆರೋಪಿಸಿದ್ದವು.
ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿದರೆ ಉಳಿದ ಎಲ್ಲಾ ತಂಡಗಳು ಪಾಕಿಸ್ತಾನದಲ್ಲಿ ಆಡಲಿವೆ. ಫೆಬ್ರವರಿ 20 ರಿಂದ ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಅಭಿಯಾನ ಆರಂಭವಾಗಲಿದ್ದು, ಚೊಚ್ಚಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

