ಬೆಂಗಳೂರು : ಭಾರತಕ್ಕೆ ಒಂದು ದೇಶ ಒಂದು ಚುನಾವಣೆ ಬೇಕು. ಯಾಕೆಂದರೆ ಒಂದು ದೇಶ- ಒಂದು ಚುನಾವಣೆ ಎಂಬುದು ದಿಢೀರ್ ಆಗಿ ಮೂಡಿರುವ ಪರಿಕಲ್ಪನೆಯಲ್ಲ, 1952ರಿಂದ 1967ರವರೆಗೆ ಇದು ಜಾರಿಯಲ್ಲಿತ್ತು ಎಂದು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.
ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಬೆಂಗಳೂರಿನ ಮತ್ತಿಕೆರೆಯ IISCಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅಣ್ಣಾಮಲೈ, ‘1980-90ರ ನಡುವಿನ ಅವಧಿಯಲ್ಲಿ ಹೆಚ್ಚು ಸರ್ಕಾರಗಳ ಪತನ ಆಗಿತ್ತು. 2000ನೇ ಇಸವಿಯ ಬಳಿಕ ಅದು ಕಡಿಮೆಯಾಗುತ್ತಾ ಸಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಸಂಸತ್ತಿನ ಸಂಸದರ ಸಂಖ್ಯೆಯೂ 543ರಿಂದ ಹೆಚ್ಚಾಗಲಿದೆ.
ಮಹಿಳೆಯರಿಗೆ ಶೇ.33 ಮೀಸಲಾತಿಯೂ ಇರಲಿದೆ. ಜೊತೆಗೇ ಒಂದೇ ಚುನಾವಣೆಯೂ ಬರಬೇಕಿದೆ. 1971ರ ಜನಗಣತಿ ಪ್ರಕಾರ ಬೆಂಗಳೂರಿನ ಸಂಸದರ ಸಂಖ್ಯೆ 3 ಇದೆ. ಬೆಂಗಳೂರು ಈಗ ಸುಮಾರು 3 ಕೋಟಿ ಜನರನ್ನು ಹೊಂದಿ ದೊಡ್ಡ ನಗರವಾಗಿದೆ. ಸಹಜವಾಗಿ ಬೆಂಗಳೂರಿನ ಸಂಸದರ ಸಂಖ್ಯೆ ಐದೋ, ಆರೋ, ಏಳೋ ಆಗಬಹುದು’ ಎಂದು ಅಣ್ಣಾಮಲೈ ಹೇಳಿದರು.
‘ಹಿಂದಿನ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಒಂದೇ ಚುನಾವಣೆ ಕುರಿತು ಅದು ದೇಶಾದ್ಯಂತ ಅಭಿಪ್ರಾಯ ಸಂಗ್ರಹಿಸಿತ್ತು. ಅರ್ಧದಲ್ಲೇ ಒಂದು ಸರಕಾರ ಅಧಿಕಾರ ಕಳೆದುಕೊಂಡರೆ ಏನು ಮಾಡಬೇಕೆಂಬ ಅಂತಲೂ ಕೋವಿಂದ್ ಸಮಿತಿ ಶಿಫಾರಸು ಮಾಡಿದೆ’ ಎಂದು ಹೇಳಿದರು.
‘ಇವಿಎಂ ಮತದಾನದ ವಿಚಾರದಲ್ಲೂ ಸುಪ್ರೀಂ ಕೋರ್ಟಿನಲ್ಲಿ ಕೇಸಿದೆ. ಇವಿಎಂ ಯಂತ್ರಕ್ಕೆ ಬ್ಲೂಟೂತ್ ಆಗಲೀ ವೈಫೈ ಆಗಲೀ ಇಲ್ಲ; ಅದರ ಸಂಬಂಧವೇ ಕೆಲವು ರಾಜಕೀಯ ಪಕ್ಷಗಳು ಕೋರ್ಟಿನ ಮೊರೆ ಹೋಗಿವೆ’ ಎಂದು ಅಣ್ಣಾಮಲೈ ಹೇಳಿದರು. ‘ಸೋತ ಪಕ್ಷವು ಕಾರಣ ಹೇಳುವುದು ಸಹಜ. ಜಿಮ್‍ಗೆ ಹೋದವರು ಬಾಡಿ ಬರ್ತಾ ಇಲ್ಲ ಉಪಕರಣ ಸರಿ ಇಲ್ಲ ಎಂದ ಹಾಗಾಗಿದೆ’ ಎಂದು ಅಣ್ಣಾಮಲೈ ವ್ಯಂಗ್ಯವಾಡಿದರು.

