ನವದೆಹಲಿ: ಭಾರತ – ಪಾಕಿಸ್ತಾನ ಸಂಘರ್ಷ ಮತ್ತು ಕದನ ವಿರಾಮದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮಟ್ಟದ ಮಾತುಕತೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದೆ ಎಂದು ಭಾರತದ ಡಿಜಿಎಂಓ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಪ್ರಕಟಿಸಿದ್ದಾರೆ.
ಸಭೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಬಿಟ್ಟುಕೊಡಬೇಕು, ಜೊತೆಗೆ ಅಗತ್ಯವಿರುವ ಮೋಸ್ಟ್ ವಾಂಟೆಡ್ ಉಗ್ರರನ್ನ ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಷರತ್ತನ್ನು ಭಾರದ ವಿಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್.ಪ್ರಮೋದ್ ಮತ್ತು ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ.ಭಾರ್ತಿ ಅವರು ಸುದ್ದಿಗೋಷ್ಠಿಯಲ್ಲಿದ್ದರು. ಆಪರೇಷನ್ ಸಿಂಧೂರ ಬಗ್ಗೆ ಸಮಗ್ರ ಮಾಹಿತಿಗಳನ್ನು ಮಾಧ್ಯಮಗಳ ಜತೆ ಹಂಚಿಕೊಳ್ಳುವ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಇಂದಿನ ಉನ್ನತ ಮಟ್ಟದ ಸಭೆಯಲ್ಲಿ ಉಭಯ ರಾಷ್ಟ್ರ ನಾಯಕರು ಪರಿಸ್ಥಿತಿತಿಗಳ ಕುರಿತು ಅವಲೋಕಿಸಲಿದ್ದಾರೆ ಎಂದು ಸಹ ಮೂಲಗಳು ತಿಳಿಸಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಯುದಾಳಿಗಳನ್ನು ನಡೆಸಿ ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ಸಂಪೂರ್ಣವಾಗಿ ನಾಶಪಡಿಸಿತ್ತು. ಅದಾದ ನಂತರ, ಪಾಕಿಸ್ತಾನದ ದುಸ್ಸಾಹಸ ಕಡಿಮೆಯಾಗಲಿಲ್ಲ ಮತ್ತು ಅದು ಭಾರತದ ಗಡಿ ಪ್ರದೇಶಗಳಲ್ಲಿ ಶೆಲ್‌ಗಳನ್ನು ಹಾರಿಸುವುದಲ್ಲದೆ, ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಲು ಪ್ರಯತ್ನಿಸಿತು, ಆದರೆ ಭಾರತದ ವಾಯು ರಕ್ಷಣಾ ವ್ಯವಸ್ಥೆಯಿಂದ ಅವು ಸಂಪೂರ್ಣವಾಗಿ ವಿಫಲವಾದವು.
ಈಗ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಅದಾದ ಬಳಿಕವೂ ಪಾಕಿಸ್ತಾನ ದಿನಗಟ್ಟಲೆ ಗುಂಡಿನ ಸುರಿಮಳೆಗೈದಿತ್ತು. ಪಾಕಿಸ್ತಾನದ ಒಳಗೆ 11 ವಾಯುನೆಲೆಗಳು ನಾಶವಾಗಿವೆ ಮತ್ತು ಆ ದೇಶದ ಮಿಲಿಟರಿ ಸಾಮರ್ಥ್ಯಕ್ಕೆ ವ್ಯಾಪಕ ಹಾನಿಯಾಗಿದೆ. ಆದ್ರೆ ಶನಿವಾರ ಕದನ ವಿರಾಮ ಘೋಷಣೆಯಾದ ಬಳಿಕವೂ ಪಾಕಿಸ್ತಾನ ಹಲವು ಬಾರಿ ಇದನ್ನು ಉಲ್ಲಂಘಿಸಿದೆ. ಶನಿವಾರ ರಾತ್ರಿ ಜಮ್ಮು ಪ್ರದೇಶದಲ್ಲಿ ಡ್ರೋನ್‌ಗಳು ಪತ್ತೆಯಾಗಿದ್ದು, ದೊಡ್ಡ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ತಿಳಿಸಿದರು.

