ನವದೆಹಲಿ: ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ಇಂದು ಐತಿಹಾಸಿಕ ಮೆಗಾ ಮುಕ್ತ-ವ್ಯಾಪಾರ ಒಪ್ಪಂದವನ್ನು (Free Trade Agreement – FTA) ಘೋಷಿಸುವ ಸಾಧ್ಯತೆಯಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಂದ ಉಂಟಾದ ಜಾಗತಿಕ ಅನಿಶ್ಚಿತತೆಗಳ ನಡುವೆಯೇ, ಎರಡೂ ಕಡೆಯವರು ದೀರ್ಘಕಾಲೀನ ಮತ್ತು ಬಲಿಷ್ಠ ಆರ್ಥಿಕ-ರಾಜತಾಂತ್ರಿಕ ಪಾಲುದಾರಿಕೆಗೆ ದಾರಿ ಮಾಡಿಕೊಡುವ ಮಹತ್ವದ ಒಪ್ಪಂದಕ್ಕೆ ಬರುವ ನಿರೀಕ್ಷೆಯಿದೆ.
FTA ಜಾರಿಗೆ ಬಂದರೆ, ವ್ಯಾಪಾರ, ರಕ್ಷಣೆ ಮತ್ತು ಭದ್ರತೆ, ಹವಾಮಾನ ಬದಲಾವಣೆ, ನಿರ್ಣಾಯಕ ತಂತ್ರಜ್ಞಾನಗಳು ಹಾಗೂ ನಿಯಮಾಧಾರಿತ ಜಾಗತಿಕ ವ್ಯವಸ್ಥೆ ಬಲಪಡಿಸುವಂತಹ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳಿಗೆ ಗುಣಾತ್ಮಕ ಬದಲಾವಣೆ ತರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ, ಎರಡೂ ಕಡೆಯವರು ರಕ್ಷಣಾ ಚೌಕಟ್ಟಿನ ಒಪ್ಪಂದ (Defence Framework Agreement) ಮತ್ತು ಕಾರ್ಯತಂತ್ರದ ಕಾರ್ಯಸೂಚಿಯನ್ನು (Strategic Agenda) ಅನಾವರಣಗೊಳಿಸಲಿದ್ದಾರೆ. ಅಮೆರಿಕ ಮತ್ತು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಇತರ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಬಂಧಗಳನ್ನು ವಿಸ್ತರಿಸಲು ಯುರೋಪ್ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಈ ಹೊಸ ಪಾಲುದಾರಿಕೆ ಮಹತ್ವ ಪಡೆದುಕೊಂಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರನ್ನು ಶೃಂಗಸಭೆಯಲ್ಲಿ ಆತಿಥ್ಯ ವಹಿಸಲಿದ್ದಾರೆ. ವಾನ್ ಡೆರ್ ಲೇಯೆನ್ ಮತ್ತು ಕೋಸ್ಟಾ ಅವರು ಕರ್ತವ್ಯ ಪಥದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಳೆದ ವಾರ ವಾನ್ ಡೆರ್ ಲೇಯೆನ್ ಅವರು, “ಭಾರತ ಮತ್ತು EU ಐತಿಹಾಸಿಕ ವ್ಯಾಪಾರ ಒಪ್ಪಂದದ ಹೊಸ್ತಿಲಲ್ಲಿವೆ. ಇದು ಎರಡು ಶತಕೋಟಿ ಜನರನ್ನು ಒಳಗೊಂಡ ಮಾರುಕಟ್ಟೆಯನ್ನು ನಿರ್ಮಿಸುತ್ತದೆ. ಇದು ಜಾಗತಿಕ GDP ಯ ಸುಮಾರು ಕಾಲು ಭಾಗದಷ್ಟಿದೆ” ಎಂದು ಹೇಳಿದ್ದರು.
ಭಾರತ ಮತ್ತು ಯುರೋಪಿಯನ್ ಒಕ್ಕೂಟವು 2004ರಿಂದ ಕಾರ್ಯತಂತ್ರದ ಪಾಲುದಾರರಾಗಿದ್ದು, ಪ್ರಸ್ತಾವಿತ ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆ (Security and Defence Partnership – SDP) ಎರಡೂ ಕಡೆಯ ನಡುವೆ ಆಳವಾದ ರಕ್ಷಣಾ ಹಾಗೂ ಭದ್ರತಾ ಸಹಕಾರಕ್ಕೆ ವೇದಿಕೆ ಒದಗಿಸಲಿದೆ.
SDP ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಕಾರ್ಯಸಾಧ್ಯತೆ (Interoperability) ಹೆಚ್ಚಳವಾಗಲಿದೆ. ಜೊತೆಗೆ, ಭಾರತೀಯ ಸಂಸ್ಥೆಗಳು EUನ SAFE (Security Action for Europe) ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾರ್ಗಗಳು ತೆರೆಯಲಿವೆ. SAFE ಎಂಬುದು EUನ 150 ಬಿಲಿಯನ್ ಯೂರೋ ಹಣಕಾಸು ಸಾಧನವಾಗಿದ್ದು, ರಕ್ಷಣಾ ಸಿದ್ಧತೆಯನ್ನು ವೇಗಗೊಳಿಸಲು ಸದಸ್ಯ ರಾಷ್ಟ್ರಗಳಿಗೆ ಹಣಕಾಸಿನ ನೆರವು ನೀಡುವ ಉದ್ದೇಶ ಹೊಂದಿದೆ.
2007ರಲ್ಲಿ ಭಾರತ ಮತ್ತು EU ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆ ಆರಂಭಿಸಿದರೂ, ಮಹತ್ವಾಕಾಂಕ್ಷೆಗಳ ಅಂತರದಿಂದಾಗಿ 2013ರಲ್ಲಿ ಅವು ಸ್ಥಗಿತಗೊಂಡಿದ್ದವು. ಬಳಿಕ ಜೂನ್ 2022ರಲ್ಲಿ ಮಾತುಕತೆಗಳನ್ನು ಪುನರಾರಂಭಿಸಲಾಯಿತು.
ಶೃಂಗಸಭೆಯಲ್ಲಿ ರಷ್ಯಾ–ಉಕ್ರೇನ್ ಯುದ್ಧ ಸೇರಿದಂತೆ ಜಾಗತಿಕ ಸವಾಲುಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ. ಎಲ್ಲ ವಿಷಯಗಳಲ್ಲೂ ಒಂದೇ ಅಭಿಪ್ರಾಯ ಇಲ್ಲದಿದ್ದರೂ, ಸ್ಥಿರ ಮತ್ತು ನಿಯಮಾಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ಹಿತಾಸಕ್ತಿಗಳನ್ನು ಎರಡೂ ಕಡೆಯವರು ಹಂಚಿಕೊಳ್ಳುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಭಾರತ–EU ಸಂಬಂಧಗಳು ಗಮನಾರ್ಹವಾಗಿ ವೃದ್ಧಿಯಾಗಿವೆ. EU ಒಂದು ಬಣವಾಗಿ ಭಾರತದ ಅತಿದೊಡ್ಡ ಸರಕು ವ್ಯಾಪಾರ ಪಾಲುದಾರವಾಗಿದೆ. 2024–25ರ ಆರ್ಥಿಕ ವರ್ಷದಲ್ಲಿ, EU ಜೊತೆಗಿನ ಭಾರತದ ಒಟ್ಟು ಸರಕುಗಳ ವ್ಯಾಪಾರವು ಸುಮಾರು 136 ಶತಕೋಟಿ ಡಾಲರ್, ಇದರಲ್ಲಿ ರಫ್ತು 76 ಶತಕೋಟಿ ಡಾಲರ್ ಮತ್ತು ಆಮದು 60 ಶತಕೋಟಿ ಡಾಲರ್ ಆಗಿದೆ.

