ನವದೆಹಲಿ, ಏಪ್ರಿಲ್ 19: ಕೆನಡಾದ ಒಂಟಾರಿಯೊದ ಹ್ಯಾಮಿಲ್ಟನ್‌ನಲ್ಲಿ ಬುಧವಾರ ಸಂಜೆ ನಡೆದ ಹಿಂಸಾಚಾರದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ಕೌರ್ ರಾಂಧವಾ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಹ್ಯಾಮಿಲ್ಟನ್‌ನಲ್ಲಿ 2 ಗುಂಪುಗಳ ಘರ್ಷಣೆಯ ನಡುವೆ ಆಕೆಗೆ ಗುಂಡು ತಗುಲಿದೆ ಎಂದು ಆಕೆಯ ಕುಟುಂಬ ಹೇಳಿಕೊಂಡಿದೆ.
ಏಪ್ರಿಲ್ 17ರ ಸಂಜೆ ಹರ್ಸಿಮ್ರತ್ ರಾಂಧವಾ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಘಟನೆಯನ್ನು ಹ್ಯಾಮಿಲ್ಟನ್ ಪೊಲೀಸರು ದೃಢಪಡಿಸಿದ್ದಾರೆ. ಅಪ್ಪರ್ ಜೇಮ್ಸ್ ಸ್ಟ್ರೀಟ್ ಮತ್ತು ಸೌತ್ ಬೆಂಡ್ ರೋಡ್ ಈಸ್ಟ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದ ವರದಿಗೆ ಪೊಲೀಸರು ಸಂಜೆ 7.30ಕ್ಕೆ ಪ್ರತಿಕ್ರಿಯಿಸಿದ್ದಾರೆ. ಕಪ್ಪು ಸೆಡಾನ್ ಮತ್ತು ಬಿಳಿ ಸೆಡಾನ್‌ನಲ್ಲಿ ಪ್ರಯಾಣಿಸುತ್ತಿದ್ದವರ ನಡುವಿನ ಸರಣಿ ಗುಂಡಿನ ದಾಳಿಯಲ್ಲಿ ಆಕೆಗೆ ಗುಂಡು ತಗುಲಿ ಆಕೆ ಮೃತಪಟ್ಟಿದ್ದಾರೆ.
2 ವರ್ಷಗಳ ಹಿಂದೆ ಕೆನಡಾಕ್ಕೆ ಹೋಗಿದ್ದ ಹರ್ಸಿಮ್ರತ್ :
ವೈದ್ಯರು ಹರ್ಸಿಮ್ರತ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಎದೆಗೆ ಗುಂಡೇಟು ಬಿದ್ದಿದ್ದರಿಂದಾಗಿ ಅವರು ಸಾವನ್ನಪ್ಪಿದರು. ಹರ್ಸಿಮ್ರತ್ 2 ವರ್ಷಗಳ ಹಿಂದೆ ಕೆನಡಾಕ್ಕೆ ಹೋಗಿದ್ದರು. ಅವರು ಹ್ಯಾಮಿಲ್ಟನ್‌ನ ಮೊಹಾಕ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಪೊಲೀಸರ ಪ್ರಕಾರ, ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಾಗ ಅವರು ಬಸ್ಗಾಗಿ ಪಕ್ಕದಲ್ಲಿ ಕಾಯುತ್ತಾ ನಿಂತಿದ್ದರು.
ಮಗಳ ಶವವನ್ನು ಭಾರತಕ್ಕೆ ಮರಳಿ ತರುವಂತೆ ಮನವಿ :
ಪಂಜಾಬ್‌ನ ಟಾರ್ನ್ ತರನ್ ಜಿಲ್ಲೆಯ ಧುಂಡಾ ಗ್ರಾಮದ ರಾಂಧವಾ ಅವರ ಕುಟುಂಬವು ತಮ್ಮ ಮಗಳ ಶವವನ್ನು ಭಾರತಕ್ಕೆ ಮರಳಿ ತರುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ. ಟೊರೊಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಯುವ ಭಾರತೀಯ ಹುಡುಗಿಯ ನಿಧನಕ್ಕೆ ಸಂತಾಪ ಸೂಚಿಸಿದೆ.

