ಸೀತಾಪುರ, : ಮನೆಯಲ್ಲಿ ಮಲಗಿಸಿದ್ದ ಮಗುವನ್ನು ಎತ್ತಿಕೊಂಡು ಹೋದ ಮಂಗಗಳು ನೀರು ತುಂಬಿದ್ದ ಡ್ರಮ್ ಒಳಗೆ ಆ ಮಗುವನ್ನು ಎಸೆದು ಕೊಂದ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.
ಗುರುವಾರ ಅನುಜ್ ಕುಮಾರ್ ಅವರ 2 ತಿಂಗಳ ಮಗು ಮನೆಯ ವರಾಂಡಾದಿಂದ ಕಾಣೆಯಾಗಿತ್ತು. ಅಲ್ಲೇ ಮಲಗಿಸಿದ್ದ ಮಗು ಎಲ್ಲೂ ಕಾಣದಿದ್ದಾಗ ಮನೆಯವರು ಗಾಬರಿಯಾಗಿ ಹುಡುಕಾಡಿದ್ದರು. ಮಗುವಿಗೆ ಸ್ನಾನ ಮಾಡಿಸಿ ಮಂಚದ ಮೇಲೆ ಮಲಗಿಸಿದ್ದ ತಾಯಿ ಸವಿತಾ ತಾನು ಸ್ನಾನ ಮಾಡಲೆಂದು ಬಾತ್ರೂಂಗೆ ಹೋಗಿದ್ದರು.
ಈ ವೇಳೆ ಮನೆಯೊಳಗೆ ನುಗ್ಗಿದ ಮಂಗಗಳು ಹಾಸಿಗೆಯ ಮೇಲೆ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿವೆ. ಮಗು ಕಾಣೆಯಾಗಿದೆ ಎಂದು ತಿಳಿದ ನಂತರ ಸವಿತಾ ಅವರ ಮನೆಯವರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಬಹಳ ಸಮಯ ಹುಡುಕಾಟ ನಡೆಸಿದ ನಂತರ ಮಗುವಿನ ಶವ ಮನೆಯ ಟೆರೇಸಿನ ಮೇಲೆ ನೀರು ತುಂಬಿದ ಡ್ರಮ್‌ನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ, ಮಂಗಗಳು ಮಗುವನ್ನು ಮಂಚದಿಂದ ತೆಗೆದುಕೊಂಡು ಡ್ರಮ್‌ನಲ್ಲಿ ಎಸೆದಿವೆ. ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದ ಆ ಮಗುವಿಗೆ ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಮಗುವಿನ ಅನಿರೀಕ್ಷಿತ ಸಾವು ಕುಟುಂಬವನ್ನು ದಂಗಾಗಿಸಿದೆ. ಆ ದಂಪತಿಗೆ ಇದು ಮೊದಲ ಮಗುವಾಗಿತ್ತು.

