ಮಂಗಳೂರು: ನಗರದ ಅಡ್ಯಾರ್ ಕಣ್ಣೂರು ಗಾಣದಬೆಟ್ಟು ಮೂಲದ ಇನ್ಫೋಸಿಸ್ ಉದ್ಯೋಗಿ ಕೇರಳದ ವಯನಾಡಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಡ್ಯಾರ್ ಕಣ್ಣೂರು ಗಾಣದಬೆಟ್ಟು ನಿವಾಸಿ ಮುಹಮ್ಮದ್ ಹಾಶೀರ್(32) ಮೃತಪಟ್ಟವರು.
ಗುರುವಾರ ಬೆಳಗ್ಗೆ ಕೇರಳದ ವಯನಾಡ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇರಳದ ವಯನಾಡ್‌ನಲ್ಲಿ ಇನ್ಫೋಸಿಸ್‌ನ ಉದ್ಯೋಗಿಯಾಗಿದ್ದರು. ಮೃತರು ಪತ್ನಿ, ಒಂದು ವರ್ಷದ ಪುತ್ರಿ ಮತ್ತು ತಂದೆ, ತಾಯಿಯ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಆರು ತಿಂಗಳಲ್ಲಿ 85ಮಂದಿ ಹೃದಯಾಘಾತದಿಂದ ಸಾವು :
ಕಳೆದ ಆರು ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 580 ಮಂದಿಗೆ ಹೃದಯಾಘಾತವಾಗಿದೆ. ಇವರಲ್ಲಿ 85 ಮಂದಿ ಮೃತಪಟ್ಟಿದ್ದಾರೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.
ಆದರೆ ಈ ಬಗ್ಗೆ ಯಾರೂ ಆತಂಕಪಡಬೇಕಾಗಿಲ್ಲ. ಜೀವನ ಶೈಲಿಯಲ್ಲಿ ಬದಲಾವಣೆ, ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ಹೃದಯಾಘಾತದಿಂದ ಪಾರಾಗಬಹುದು ಎಂದಿದ್ದಾರೆ.
ಮೃತಪಟ್ಟವರಲ್ಲಿ ಯುವ ಜನತೆ ಬಹಳ ಕಡಿಮೆ ಇದ್ದಾರೆ. ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ 2025 ಜನವರಿ 1ರಿಂದ ಜೂನ್ 30ರ ತನಕ 580 ಮಂದಿಗೆ ಹೃದಯಾಘಾತವಾಗಿದೆ. ಈ ಪೈಕಿ 495 ಮಂದಿ ಚೇತರಿಸಿಕೊಂಡಿದ್ದಾರೆ. ಮೃತಪಟ್ಟಿರುವ 85 ಮಂದಿಯ ಪೈಕಿ ಪುರುಷರು 54 ಮತ್ತು ಮಹಿಳೆಯರು 31 ಮಂದಿ ಎಂದು ತಿಳಿಸಿದ್ದಾರೆ.
ಈ ಆರು ತಿಂಗಳಲ್ಲಿ 61-85 ವಯಸ್ಸಿನ ಅಧಿಕ ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ 61-85 ವಯಸ್ಸಿನ ಹಿರಿಯ ನಾಗರಿಕರು 47 ಮಂದಿ ಬಲಿಯಾಗಿದ್ದಾರೆ. 30ರ ಹರೆಯದ ಒಬ್ಬರು ಮೃತಪಟ್ಟಿದ್ದಾರೆ, 30-40 ವಯಸ್ಸಿನವರು ಮೂವರು, 41-50ರ ವಯಸ್ಸಿನವರು 16ಮಂದಿ ಮತ್ತು 51-60 ವಯಸ್ಸಿನ 18 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ದಾಖಲಿಸಿರುವ ಅಂಕಿ ಅಂಶಗಳು ತಿಳಿಸಿದೆ.

