ವಾಷಿಂಗ್ಟನ್, ಏಪ್ರಿಲ್ 07: ಇರಾನ್ ವಿರುದ್ಧ ತೀವ್ರ ನಿಲುವು ತಳೆದಿರುವ ಅಮೆರಿಕಾ ಅಧ್ಯಕ್ಷ Donald Trump ಮಂಗಳವಾರದೊಳಗೆ ಒಪ್ಪಂದಕ್ಕೆ ಬರದಿದ್ದರೆ ಕೇವಲ ನಾಲ್ಕು ಗಂಟೆಗಳಲ್ಲಿ ಇರಾನ್ ಅನ್ನು ಸಂಪೂರ್ಣವಾಗಿ ಧ್ವಂಸ ಮಾಡುವುದಾಗಿ ಭಾರೀ ಎಚ್ಚರಿಕೆ ನೀಡಿದ್ದಾರೆ. ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇರಾನ್‌ನ ಪ್ರಮುಖ ಸೇತುವೆಗಳು ಹಾಗೂ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಗುಡುಗಿದ್ದಾರೆ.
ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಯುದ್ಧಾಪರಾಧ ಎಂಬ ಟೀಕೆಗಳನ್ನು ತಳ್ಳಿಹಾಕಿದ ಟ್ರಂಪ್, ಇರಾನ್ ಜನರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. “ಅವರು ಹೆಚ್ಚಿನ ದಾಳಿಗಳನ್ನು ಬಯಸುತ್ತಿದ್ದಾರೆ ಮತ್ತು ಸ್ವಾತಂತ್ರ್ಯಕ್ಕಾಗಿ ಸಂಕಷ್ಟ ಅನುಭವಿಸಲು ಸಿದ್ಧರಾಗಿದ್ದಾರೆ” ಎಂದು ಹೇಳಿದ್ದಾರೆ. ಜೊತೆಗೆ ಹಾರ್ಮುಜ್ ಜಲಸಂಧಿಯನ್ನು ಮಂಗಳವಾರ ರಾತ್ರಿ 8 ಗಂಟೆಯೊಳಗೆ ಮುಕ್ತಗೊಳಿಸುವಂತೆ ಅಂತಿಮ ಗಡುವು ನೀಡಿದ್ದಾರೆ.
ಇನ್ನೊಂದೆಡೆ, ಅಮೆರಿಕಾ ನೀಡಿದ್ದ 45 ದಿನಗಳ ತಾತ್ಕಾಲಿಕ ಯುದ್ಧ ವಿರಾಮ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ. ಈ ನಡುವೆ ಅಮೆರಿಕಾ ರಕ್ಷಣಾ ಕಾರ್ಯದರ್ಶಿ Pete Hegseth ಕೂಡ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, “ಅಧ್ಯಕ್ಷರು ಗಂಭೀರರಾಗಿದ್ದಾರೆ, ವಿವೇಕಯುತ ನಿರ್ಧಾರ ತೆಗೆದುಕೊಳ್ಳಿ” ಎಂದು ಹೇಳಿದ್ದಾರೆ.
ಈ ಎಚ್ಚರಿಕೆಗಳಿಗೆ ಇರಾನ್ ತೀವ್ರ ಪ್ರತಿಕ್ರಿಯೆ ನೀಡಿದ್ದು, “ಅಮೆರಿಕದ ಬೆದರಿಕೆಗಳಿಗೆ ತಲೆಬಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದೆ. ಇರಾನ್‌ನ ‘ಖಾತಮ್ ಅಲ್ ಅಂಬಿಯಾ’ ಜಂಟಿ ಮಿಲಿಟರಿ ಕಮಾಂಡ್ ಪ್ರತಿಕ್ರಿಯೆ ನೀಡುತ್ತಾ, ಅಮೆರಿಕ ಪದೇ ಪದೇ ಮಿಲಿಟರಿ ವೈಫಲ್ಯ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದೆ.
ಇದಲ್ಲದೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತನ್ನ ದಾಳಿಗಳನ್ನು ಮತ್ತಷ್ಟು ತೀವ್ರಗೊಳಿಸುವ ಸೂಚನೆ ನೀಡಿರುವುದು ಮಧ್ಯಪ್ರಾಚ್ಯದ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಈ ಬೆಳವಣಿಗೆಗಳ ನಡುವೆ ಮಂಗಳವಾರ ಮಧ್ಯರಾತ್ರಿ ಬಳಿಕ ಪರಿಸ್ಥಿತಿ ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ಜಾಗತಿಕ ಕಣ್ಣು ನೆಟ್ಟಿದೆ.

