ಚಿಕ್ಕಬಳ್ಳಾಪುರ, (ಮಾರ್ಚ್ 01): ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲ ಅಲಿ ಖಮೇನಿ ಸಾವನ್ನಪ್ಪಿರುವ ಸುದ್ದಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಗ್ರಾಮದಲ್ಲಿನ ಎಲ್ಲಾ ಅಂಗಡಿ–ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಮೂರು ದಿನಗಳ ಕಾಲ ‘ಬ್ಲಾಕ್ ಡೇ’ (ಕರಾಳ ದಿನ) ಆಚರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
‘ಬೇಬಿ ಆಫ್ ಇರಾನ್’ ಎಂದೇ ಕರೆಸಿಕೊಳ್ಳುವ ಅಲೀಪುರ ಗ್ರಾಮಕ್ಕೆ 1986ರಲ್ಲಿ ಖಮೇನಿ ಭೇಟಿ ನೀಡಿದ್ದ ಹಿನ್ನೆಲೆ ಗ್ರಾಮಸ್ಥರೊಂದಿಗೆ ವಿಶೇಷ ನಂಟು ಬೆಳೆದಿತ್ತು. ಅವರ ಹೆಸರಿನಲ್ಲಿ ಗ್ರಾಮದಲ್ಲಿ ಆಸ್ಪತ್ರೆಯೂ ಸ್ಥಾಪಿಸಲಾಗಿದೆ. ಖಮೇನಿ ಬಗ್ಗೆ ಇಲ್ಲಿನ ಜನರಲ್ಲಿ ಅಪಾರ ಗೌರವ ಮತ್ತು ಭಕ್ತಿಭಾವವಿದ್ದು, ಅವರ ಸಾವಿನ ಸುದ್ದಿ ಗ್ರಾಮವನ್ನು ಸ್ತಬ್ಧಗೊಳಿಸಿದೆ.
ಇನ್ನೂ ಅಲೀಪುರದ ಕೆಲವರು ಧಾರ್ಮಿಕ ಶಿಕ್ಷಣಕ್ಕಾಗಿ ಇರಾನ್‌ನಲ್ಲಿ ನೆಲೆಸಿದ್ದು, ಕೆಲ ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಇರಾನ್‌ನಲ್ಲಿ ಯುದ್ಧ ಪರಿಸ್ಥಿತಿ ಉಂಟಾದಾಗಲೆಲ್ಲಾ ಗ್ರಾಮಸ್ಥರಲ್ಲಿ ಆತಂಕ ಮೂಡುತ್ತದೆ. ತಮ್ಮ ಬಂಧು–ಬಳಗದವರ ಸುರಕ್ಷತೆ ಬಗ್ಗೆ ಕಳವಳ ಹೆಚ್ಚಾಗುತ್ತದೆ. ಸದ್ಯ ಅಲೀಪುರ ಗ್ರಾಮ ಮೌನಕ್ಕೆ ಜಾರಿದ್ದು, ಹಲವರು ಕಣ್ಣೀರಿನಲ್ಲಿ ತೇಲುತ್ತಿದ್ದಾರೆ.

