ಬೆಂಗಳೂರು: ಬೆಂಗಳೂರಿನಿಂದ ದುಬೈಗೆ ತೆರಳಿದ್ದ ಎಮಿರೇಟ್ಸ್ ವಿಮಾನಕ್ಕೆ ದುಬೈನಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ಸಿಗದ ಕಾರಣ ವಿಮಾನವನ್ನು ವಾಪಸ್ ಬೆಂಗಳೂರಿಗೆ ತರಲಾಗಿದೆ.
ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ ಸುಮಾರು 4:30ಕ್ಕೆ ವಿಮಾನ ಟೇಕಾಫ್ ಆಗಿತ್ತು. ಆದರೆ ದುಬೈಗೆ ತಲುಪಿದ ಬಳಿಕ ಲ್ಯಾಂಡಿಂಗ್‌ಗೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ವಿಮಾನವನ್ನು ಮರಳಿ ಬೆಂಗಳೂರಿಗೆ ತಿರುಗಿಸಲಾಗಿದೆ. ಇದರಿಂದ ಜಿದ್ದಾಗೆ ಸಂಪರ್ಕ ವಿಮಾನದಲ್ಲಿ ತೆರಳಬೇಕಿದ್ದ ಹಲವಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು.
ವಿಮಾನ ವಾಪಸ್ ಬಂದ ಬಳಿಕ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲೇ ತಿಂಡಿ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಏರ್‌ಲೈನ್ಸ್ ಸಂಸ್ಥೆ ಪ್ರಯಾಣಿಕರಿಗೆ ಹೋಟೆಲ್ ವ್ಯವಸ್ಥೆಯನ್ನೂ ಕಲ್ಪಿಸಿದೆ.
ಇದಕ್ಕೂ ಮಧ್ಯೆ, ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರಾನ್‌ನಿಂದ ಡ್ರೋನ್ ದಾಳಿ ನಡೆದಿರುವುದು ವರದಿಯಾಗಿದೆ. ಡ್ರೋನ್ ಇಂಧನ ಟ್ಯಾಂಕ್‌ಗೆ ಅಪ್ಪಳಿಸಿದ ಪರಿಣಾಮ ಭಾರೀ ಸ್ಫೋಟ ಸಂಭವಿಸಿ ನಿಲ್ದಾಣದ ಸಮೀಪ ಬೆಂಕಿ ಕಾಣಿಸಿಕೊಂಡಿದೆ. ಇದರ ಪರಿಣಾಮವಾಗಿ ಕೆಲ ಸಮಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ದುಬೈ ನಾಗರಿಕ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಡ್ರೋನ್ ದಾಳಿಯಿಂದ ವಿಮಾನ ನಿಲ್ದಾಣದ ಸಮೀಪದ ಇಂಧನ ಟ್ಯಾಂಕ್‌ಗಳಲ್ಲಿ ಒಂದಕ್ಕೆ ಹಾನಿಯಾಗಿದೆ ಎಂದು ದುಬೈ ಮಾಧ್ಯಮ ಕಚೇರಿ ‘ಎಕ್ಸ್’ನಲ್ಲಿ ತಿಳಿಸಿದೆ. ಸುತ್ತಮುತ್ತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದ್ದು, ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

