ವಿದೇಶಾಂಗ ಸಚಿವ ಎಸ್.ಜೈಶಂಕರ್ 5 ವರ್ಷಗಳಲ್ಲಿ ಮೊದಲ ಬಾರಿಗೆ ಚೀನಾಕ್ಕೆ ತೆರಳಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಮಂಗಳವಾರ(ಜು.15)ಭೇಟಿಯಾದರು. ಚೀನಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO) ವಿದೇಶಾಂಗ ಸಚಿವರ ಸಭೆಯ ಹಿನ್ನಲೆಯಲ್ಲಿ ಜೈಶಂಕರ್ ಚೀನಾದಲ್ಲಿದ್ದಾರೆ.
ಭೇಟಿಯ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೈ ಶಂಕರ್, ”ಇಂದು (ಜು15) ಬೆಳಿಗ್ಗೆ ಬೀಜಿಂಗ್‌ನಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ವಿದೇಶಾಂಗ ಮಂತ್ರಿಗಳೊಂದಿಗೆ ಭೇಟಿಯಾದೆ.ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಶುಭಾಶಯಗಳನ್ನು ತಿಳಿಸಿದೆ. ನಮ್ಮ ದ್ವಿಪಕ್ಷೀಯ ಸಂಬಂಧಗಳ ಇತ್ತೀಚಿನ ಬೆಳವಣಿಗೆಯ ಬಗ್ಗೆ ಅಧ್ಯಕ್ಷ ಕ್ಸಿ ಅವರಿಗೆ ವಿವರಿಸಿದೆ. ಈ ನಿಟ್ಟಿನಲ್ಲಿ ನಮ್ಮ ನಾಯಕರ ಮಾರ್ಗದರ್ಶನವನ್ನು ಗೌರವಿಸಿ ಎಂದಿದ್ದೇನೆ” ಎಂದು ತಿಳಿಸಿದ್ದಾರೆ
ಜೂನ್ 2020ರ ಗಾಲ್ವಾನ್ ಕಣಿವೆ ಘರ್ಷಣೆಯ ನಂತರ ಇಬ್ಬರು ನಾಯಕರ ನಡುವಿನ ಮೊದಲ ಸಭೆ ಇದಾಗಿದ್ದು, ಆ ಘರ್ಷಣೆಯಲ್ಲಿ ಎರಡು ದೇಶಗಳ ಅನೇಕ ಸೈನಿಕರು ಪ್ರಾಣ ಕಳೆದುಕೊಳ್ಳುವಂತಾಯಿತು. ಅಂದಿನಿಂದ, ಎರಡೂ ರಾಷ್ಟ್ರಗಳು ನಡುವಿನ ಸಂಬಂಧ ಅಷ್ಟಾಗಿ ಚೆನ್ನಾಗಿರಲಿಲ್ಲ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗಿನ ಸಭೆಯಲ್ಲಿ ಜೈಶಂಕರ್ ಈ ವಿಷಯವನ್ನು ಪ್ರಸ್ತಾಪಿಸಿದರು. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡುವತ್ತ ಗಮನಹರಿಸುವ ಬಗ್ಗೆ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
“ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ದಿಸುವ ನಿಟ್ಟಿನಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ ನಾವು ಉತ್ತಮ ಪ್ರಗತಿ ಸಾಧಿಸಿದ್ದೇವೆ, ಉದ್ವಿಗ್ನತೆಯನ್ನು ಶಮನಗೊಳಿಸುವುದು ಸೇರಿದಂತೆ ಗಡಿಗೆ ಸಂಬಂಧಿಸಿದ ಇತರ ಅಂಶಗಳನ್ನು ಪರಿಹರಿಸುವುದು ಈಗ ನಮ್ಮ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.
ನಿರ್ಣಾಯಕ ಖನಿಜಗಳ ಮೇಲಿನ ಚೀನಾದ ರಫ್ತು ನಿರ್ಬಂಧಗಳನ್ನು ಉಲ್ಲೇಖಿಸಿದ ವಿದೇಶಾಂಗ ಸಚಿವ ಜೈಶಂಕರ್ ಚೀನಾವನ್ನು “ನಿರ್ಬಂಧಿತ ವ್ಯಾಪಾರ ಕ್ರಮಗಳು ಮತ್ತು ರಸ್ತೆ ತಡೆಗಳನ್ನು” ತಪ್ಪಿಸುವಂತೆ ಒತ್ತಾಯಿಸಿದರು. ಭಿನ್ನಾಭಿಪ್ರಾಯಗಳು ವಿವಾದಗಳಾಗಬಾರದು ಮತ್ತು ಸ್ಪರ್ಧೆಯು ಸಂಘರ್ಷವಾಗಬಾರದು ಎಂದು ಅವರು ಒತ್ತಿ ಹೇಳಿದರು.
ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಎಸ್‌ಸಿಒ ನಾಯಕರ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಭೇಟಿ ನೀಡುವ ಸಾಧ್ಯತೆ ಇದ್ದು, ಅದಕ್ಕೆ ಅಡಿಪಾಯ ಹಾಕುವುದು ಈ ಭೇಟಿಯ ಗುರಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.(ಏಜೆನ್ಸೀಸ್)

