ಬೆಂಗಳೂರು, ಫೆ.18: ಜೆಪಿ ನಗರ ನಿವಾಸದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಲವು ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಿದರು.
“ಜನರೊಂದಿಗೆ ಜನತಾದಳ” ಎರಡನೇ ಹಂತದ ಪ್ರವಾಸ ಮೈಸೂರಿನ ಪಿರಿಯಾಪಟ್ಟಣದಿಂದ ಆರಂಭವಾಗಲಿದ್ದು, 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಯಲಿದೆ ಎಂದು ತಿಳಿಸಿದರು. ಒಂದು ತಿಂಗಳ ಕಾಲ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಈಗಾಗಲೇ 52 ಕ್ಷೇತ್ರಗಳಲ್ಲಿ ಪ್ರವಾಸ ಮುಗಿಸಿ 9000 ಕಿಲೋಮೀಟರ್ ಕ್ರಮಿಸಲಾಗಿದೆ ಎಂದು ಹೇಳಿದರು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗಗಳಲ್ಲಿ ಪ್ರವಾಸ ಯಶಸ್ವಿಯಾಗಿ ನಡೆದಿರುವುದಾಗಿ ಹೇಳಿದರು.
ಮೈತ್ರಿ ಕುರಿತ ಹೇಳಿಕೆ
ಮೈತ್ರಿಗೆ ಧಕ್ಕೆ ಉಂಟುಮಾಡುವಂತ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾಲ್ಕು ಗೋಡೆಗಳ ಒಳಗೆ ಚರ್ಚೆಯಾಗಬೇಕಾದ ವಿಷಯ ಹೊರಗೆ ಬರಬಾರದು. ಹಾದಿಬೀದಿಯಲ್ಲಿ ಚರ್ಚೆ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ” ಎಂದರು. ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮೈತ್ರಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಹಾಗೂ ಸಂತೋಷ್ ಜಿ ಅವರ ಮಾರ್ಗದರ್ಶನವೂ ಮೈತ್ರಿಗೆ ಇದೆ ಎಂದು ಹೇಳಿದರು.
“ಆಂತರಿಕ ಚರ್ಚೆಯಲ್ಲಿ ಅಪಸ್ವರಗಳು ಸಹಜ. ಆದರೆ ಅವನ್ನು ಮಾಧ್ಯಮಗಳ ಮುಂದೆ ಹೇಳದಂತೆ ನೋಡಿಕೊಳ್ಳುವುದು ನಾಯಕರ ಜವಾಬ್ದಾರಿ,” ಎಂದರು.
ಮೈತ್ರಿ ಮುರಿಯುವ ಹೇಳಿಕೆಗಳ ಬಗ್ಗೆ
28 ಕ್ಷೇತ್ರಗಳಲ್ಲಿ ಜೆಡಿಎಸ್ ಉತ್ತಮ ಮತಗಳನ್ನು ಪಡೆದಿದೆ ಎಂದು ಹೇಳಿದ ಅವರು, ಸೌದತ್ತಿಯಲ್ಲಿ 32 ಸಾವಿರ, ಶೃಂಗೇರಿಯಲ್ಲಿ 19 ಸಾವಿರ, ತಿಪಟೂರಿನಲ್ಲಿ 31 ಸಾವಿರ ಮತಗಳನ್ನು ಪಡೆದಿರುವುದಾಗಿ ಉದಾಹರಣೆ ನೀಡಿದರು. “ನಾವು ಒಳ್ಳೆಯ ಉದ್ದೇಶಕ್ಕಾಗಿ ಕೈಜೋಡಿಸಿದ್ದೇವೆ. ಈ ಭ್ರಷ್ಟ ಸರ್ಕಾರವನ್ನು ಕರ್ನಾಟಕದಿಂದ ದೂರ ಮಾಡಲು ಮೈತ್ರಿ ಮಾಡಿಕೊಂಡಿದ್ದೇವೆ,” ಎಂದರು.
ಜೆಡಿಎಸ್ ಅಸ್ತಿತ್ವದ ಪ್ರಶ್ನೆ
ಮೈತ್ರಿಯಿಂದ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಅಲಯನ್ಸ್ ಪರಸ್ಪರ ಪ್ರೀತಿ-ವಿಶ್ವಾಸದಿಂದ ಹುಟ್ಟಿಕೊಂಡಿದೆ. ಎಚ್.ಡಿ. ದೇವೇಗೌಡ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ,” ಎಂದು ಸ್ಪಷ್ಟಪಡಿಸಿದರು.
ಎನ್‌ಡಿಎ 140 ರಿಂದ 150 ಸೀಟುಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಅಣ್ಣತಮ್ಮಂದಿರಂತೆ ಕೆಲಸ ಮಾಡಿ ಲೋಕಸಭೆಯಲ್ಲಿ ಗೆದ್ದಂತೆ ವಿಧಾನಸಭೆಯಲ್ಲೂ ಗೆಲ್ಲುತ್ತೇವೆ,” ಎಂದರು.
ಪ್ರಿಯಾಂಕ ಖರ್ಗೆ ಹೇಳಿಕೆ
ಪ್ರಿಯಾಂಕ ಖರ್ಗೆ ಅವರು ಜೆಡಿಎಸ್ ಕಡೆಗಣಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “25 ವರ್ಷ ಪೂರೈಸಿದ ಪ್ರಾದೇಶಿಕ ಪಕ್ಷವಾಗಿ ಬೆಳ್ಳಿಹಬ್ಬ ಆಚರಿಸಿದ್ದೇವೆ. ಜನತಾದಳದ ಶಕ್ತಿ ಎಲ್ಲರಿಗೂ ಗೊತ್ತಿದೆ,” ಎಂದರು.
ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ?
ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ನಾವು ಯಾವುದೇ ಘೋಷಣೆ ಮಾಡಿಲ್ಲ. ಹೇಳಿಕೆಯನ್ನು ತಿರುಚಲಾಗಿದೆ,” ಎಂದು ಹೇಳಿದರು.
ZP & TP ಮೈತ್ರಿ
ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮೈತ್ರಿ ವಿಚಾರ ಇನ್ನೂ ಚರ್ಚೆಗೆ ಬಂದಿಲ್ಲ ಎಂದರು. “ಚುನಾವಣೆಗಳೇ ನಡೆಯುತ್ತವೆಯೋ ಇಲ್ಲವೋ ತಿಳಿದಿಲ್ಲ. ಸೂಕ್ತ ಸಂದರ್ಭದಲ್ಲಿ ಕಾರ್ಯಕರ್ತರ ಹಿತದೃಷ್ಟಿಯಿಂದ ತೀರ್ಮಾನ ಮಾಡಲಾಗುತ್ತದೆ,” ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ಕುರಿತು ಮಾತನಾಡಿದ ಅವರು, “135 ಜನರಿಗೆ ಜನರು ಸ್ಪಷ್ಟ ಬಹುಮತ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸುವುದು ಮೊದಲ ಆದ್ಯತೆ ಆಗಬೇಕು,” ಎಂದರು. ರಾಜ್ಯದಲ್ಲಿ 3 ಲಕ್ಷ ಕೋಟಿ ಸಾಲವಾಗಿದೆ ಎಂದು ಆರೋಪಿಸಿದರು.
ಜಿ.ಟಿ. ದೇವೇಗೌಡ ವಿಚಾರ
ಜಿ.ಟಿ. ದೇವೇಗೌಡರ ರಾಜಕೀಯ ಮುಗಿಯುತ್ತದೆಯೇ ಎಂಬ ಪ್ರಶ್ನೆಗೆ, “ಯಾರದ್ದೂ ಮುಗಿದ ಅಧ್ಯಾಯ ಅಲ್ಲ, ನೋಡೋಣ,” ಎಂದು ಹೇಳಿದರು.

