ವಾಷಿಂಗ್ಟನ್: 1977ರಿಂದ 1981ರವರೆಗೆ ಅಮೆರಿಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಜಿಮ್ಮಿ ಕಾರ್ಟರ್ ನಿಧನರಾಗಿದ್ದಾರೆ. 100 ವರ್ಷ ವಯಸ್ಸಿನ ಜಿಮ್ಮಿ ಕಾರ್ಟರ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜಾರ್ಜಿಯಾದ ಪ್ಲೇನ್ಸ್‌ನಲ್ಲಿರುವ ತಮ್ಮ ಸ್ವಗ್ರಹದಲ್ಲಿ ಜಿಮ್ಮಿ ಕಾರ್ಟರ್ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಖಚಿತಪಡಿಸಿವೆ.
1977ರ ಜನವರಿ 20ಕ್ಕೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಜಿಮ್ಮಿ ಕಾರ್ಟರ್ ಅವರು, 1981ರ ಜನವರಿ 20ರ ತನಕ ತಮ್ಮ ಆಡಳಿತ ನಡೆಸಿದ್ದರು. ಜಿಮ್ಮಿ ಕಾರ್ಟರ್ ತಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಯುದ್ಧಗಳನ್ನ ತಪ್ಪಿಸಿದ್ದರು ಎಂಬ ಕಾರಣಕ್ಕೆ & ಈ ಮೂಲಕ ಶಾಂತಿ ಸ್ಥಾಪನೆ ಮಾಡಿದ್ದರು ಎಂಬ ಕಾರಣಕ್ಕೆ ಜಿಮ್ಮಿ ಕಾರ್ಟರ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಕೂಡ ನೀಡಲಾಗಿತ್ತು. ಹೀಗೆ, ಹಲವು ಸಾಧನೆ ಮಾಡಿದ್ದ ಜಿಮ್ಮಿ ಕಾರ್ಟರ್ ಇದೀಗ ತಮ್ಮ ಜೀವನದ ಪಯಣ ಮುಗಿಸಿದ್ದಾರೆ.
ಜಾಕ್, ಚಿಪ್, ಜೆಫ್, ಆ್ಯಮಿ ಎಂಬ ನಾಲ್ವರು ಮಕ್ಕಳನ್ನು ಅಗಲಿರುವ ಜಿಮ್ಮಿ ಅವರಿಗೆ 11 ಮಂದಿ ಮೊಮ್ಮಕ್ಕಳು, 14 ಮಂದಿ ಮರಿಮೊಮ್ಮಕ್ಕಳಿದ್ದಾರೆ.
1924ರ ಅಕ್ಟೋಬರ್ 1 ರಂದು ಹುಟ್ಟಿದ್ದ ಜಿಮ್ಮಿ ಕಾರ್ಟರ್ ಬರೋಬ್ಬರಿ 100 ವರ್ಷಗಳ ಕಾಲ ಜೀವಿಸಿದ್ದರು. ಜಾರ್ಜಿಯಾದ ಪ್ಲೈನ್ಸ್‌ನಲ್ಲಿ ಜನಿಸಿದ ಶತಾಯುಷಿ ಜಿಮ್ಮಿ ಕಾರ್ಟರ್ ಅವರು ಸಾರ್ವಜನಿಕ ಸೇವೆ ಮತ್ತು ಮಾನವೀಯ ಕೆಲಸದ ಹಿನ್ನೆಲೆಯಿಂದ ಅಧ್ಯಕ್ಷೀಯ ಪದವಿ ಅವರನ್ನು ಅರಸಿ ಬಂದಿತ್ತು. ಎಂಜಿನಿಯರಿಂಗ್ ಪದವೀಧರರಾಗಿ ಬಳಿಕ ಜಾರ್ಜಿಯಾದ ಗವರ್ನರ್ ಆದ ಜಿಮ್ಮಿ ಕಾರ್ಟರ್ 1976ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುತೇಕ ಹೊರಗಿನವರು ಎನಿಸಿಕೊಂಡಿದ್ದರು.
ವಾಟರ್‌ಗೇಟ್ ಹಗರಣ ಮತ್ತು ವಿಯೆಟ್ನಾಂ ಯುದ್ಧದಿಂದ ತತ್ತರಿಸಿದ್ದ ಅಮೆರಿಕ ದೇಶಕ್ಕೆ ಪುನಶ್ಚೇತನ ನೀಡುವ ಮಹತ್ವದ ಹೊಣೆಯನ್ನು ಜಿಮ್ಮಿ ಕಾರ್ಟರ್ ಹೊತ್ತುಕೊಂಡಿದ್ದರು. ಸಾರ್ವಜನಿಕ ದೇಣಿಗೆಯಿಂದ ಪ್ರಚಾರ ಅಭಿಯಾನ ಕೈಗೊಂಡ ಕಾರ್ಟರ್, ಪಾರದರ್ಶಕತೆ ಕೇಂದ್ರಿತ ಪ್ರಚಾರದ ಕಾರಣದಿಂದ ಗೆರಾಲ್ರ್ಡ್ ಫೋರ್ಡ್ ವಿರುದ್ಧ ಅಲ್ಪ ಅಂತರದ ಜಯ ಸಾಧಿಸಿದ್ದರು.
ಇನ್ನು ಜಿಮ್ಮಿ ಕಾರ್ಟರ್ ನಿಧನಕ್ಕೆ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್, ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಜಾಗತಿಕ ನಾಯಕರೂ ಜಿಮ್ಮಿ ಕಾರ್ಟರ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.