ಶ್ರೀನಗರ: ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಬಿಜೆಪಿ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸಮ್ಮುಖದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಚಾರವನ್ನು ಕಿಕ್‌ಸ್ಟಾರ್ಟ್ ಮಾಡಲು ಎರಡು ದಿನಗಳ ಭೇಟಿಗಾಗಿ ಷಾ ಮುಂಜಾನೆ ಜಮ್ಮು ತಲುಪಿದರು.
ಪ್ರಣಾಳಿಕೆ ಬಿಡುಗಡೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಷಾ, ನಾವು ಉಜ್ವಲ ಯೋಜನೆಯಡಿ ವರ್ಷಕ್ಕೆ ಎರಡು ಉಚಿತ ಸಿಲಿಂಡರ್‌ಗಳನ್ನು ನೀಡುತ್ತೇವೆ. ಪ್ರಗತಿ ಶಿಕ್ಷಾ ಯೋಜನೆಯಡಿ, ನಾವು ಪ್ರಯಾಣ ಭತ್ಯೆಯಾಗಿ ಕಾಲೇಜು ವಿದ್ಯಾರ್ಥಿಗಳಿಗೆ ವರ್ಷಕ್ಕೆ 3,000 ರೂ. ನೀಡುತ್ತೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆಯನ್ನು ಬಿಜೆಪಿ ಖಚಿತಪಡಿಸುತ್ತದೆ. ಬಿಜೆಪಿಯ 25 ಅಂಶಗಳ ಪ್ರಣಾಳಿಕೆಯ ಪ್ರಕಾರ, ದೂರದ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ಗಳು ಅಥವಾ ಲ್ಯಾಪ್‌ಟಾಪ್‌ಗಳನ್ನು ನೀಡಲಾಗುವುದು. ಆದರೆ ಕಾಲೇಜು ವಿದ್ಯಾರ್ಥಿಗಳು ಪ್ರಗತಿ ಶಿಕ್ಷಾ ಯೋಜನೆಯಡಿ ವಾರ್ಷಿಕ 3,000 ರೂ. ಪ್ರಯಾಣ ಭತ್ಯೆಯಿಂದ ಪ್ರಯೋಜನ ಪಡೆಯುತ್ತಾರೆ ಎಂದರು.
ನಾನು ಒಮರ್ ಅಬ್ದುಲ್ಲಾಗೆ ಹೇಳಲು ಬಯಸುತ್ತೇನೆ. ಚುನಾವಣೆ ಫಲಿತಾಂಶ ಏನೇ ಇರಲಿ, ಗುಜ್ಜರ್, ಬಕರ್ವಾಲ್ ಮತ್ತು ಪಹಾಡಿಗಳಿಗೆ ನೀಡಲಾದ ಮೀಸಲಾತಿಯನ್ನು ಮುಟ್ಟಲು ನಿಮಗೆ ಅನುಮತಿ ನೀಡುವುದಿಲ್ಲ. ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೆ ಮೂರು ಹಂತಗಳಲ್ಲಿ ಸೆಪ್ಟೆಂಬರ್ 18 ಮತ್ತು 25 ಮತ್ತು ಅಕ್ಟೋಬರ್ 1 ರಂದು ಮತದಾನ ನಡೆಯಲಿದೆ.
370ನೇ ವಿಧಿ ಈಗ ಇತಿಹಾಸ :
ಸಂವಿಧಾನದ 370ನೇ ವಿಧಿ ಈಗ ಇತಿಹಾಸವಾಗಿದೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಈ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತೆ ಎಂದಿಗೂ ಜಾರಿಯಾಗುವುದಿಲ್ಲ ಎಂದು ಇಡೀ ದೇಶದ ಜನರಿಗೆ ಸ್ಪಷ್ಟ ಪಡಿಸುತ್ತಿದ್ದೇನೆ ಎಂದು ಹೇಳಿದರು. ಕಳೆದ 10 ವರ್ಷಗಳ ಅವಧಿಯು ದೇಶ ಮತ್ತು ಜಮ್ಮು & ಕಾಶ್ಮೀರದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ ಮತ್ತು ಉತ್ತಮ ಆಡಳಿತವನ್ನು ಮುಂದುವರಿಸಲು ಬಿಜೆಪಿಗೆ ಮತನೀಡುತ್ತಾರೆ ಎಂಬ ಸಂಪೂರ್ಣ ಭರವಸೆ ಇದೆ ಎಂದು ತಿಳಿಸಿದರು.
370 ನೇ ವಿಧಿ ಇನ್ನು ಮುಂದೆ ಸಂವಿಧಾನದ ಭಾಗವಲ್ಲ. “ಈ ವಿಧಿಯು ಯುವಕರ ಕೈಯಲ್ಲಿ ಶಸ್ತ್ರಾಸ್ತ್ರ ಮತ್ತು ಕಲ್ಲುಗಳನ್ನು ಮಾತ್ರ ನೀಡಿದೆ. ಭಯೋತ್ಪಾದನೆಯ ಹಾದಿಯನ್ನು ತುಳಿಯಲು ಅವರಿಗೆ ಅನುಕೂಲ ಮಾಡಿಕೊಟ್ಟಿದೆ” ಎಂದು ಷಾ ಹೇಳಿದರು.