ಒಟ್ಟಾವೊ: ಆಂತರಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 2013ರಿಂದ ಕೆನಡಾದ ಲಿಬರಲ್ ಪಕ್ಷದ ನಾಯಕ ಹಾಗೂ 2015ರಿಂದ ಪ್ರಧಾನಿಯಾಗಿರುವ ಟ್ರುಡೋ, ಈ ಎರಡೂ ಹುದ್ದೆಗಳಿಗೂ ಇಂದು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಸ್ಥಳೀಯ ಕಾಲಮಾನ ಬೆಳಗ್ಗೆ ರೈಡೋ ಕಾಟೇಜ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ಘೋಷಿಸಿದ್ದಾರೆ. ಅಲ್ಲದೇ ಗವರ್ನರ್ ಜನರಲ್ ಅವರಿಗೆ ಸಂಸತ್ತನ್ನು ಮಾರ್ಚ್ 24ರ ವರೆಗೆ ಮುಂದೂಡುವಂತೆ ವಿನಂತಿಸಿದ್ದಾರೆ ಎಂದು ವರದಿಯಾಗಿದೆ.
“ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡಿದ ನಂತರ ನಾನು ಪಕ್ಷದ ನಾಯಕನ ಸ್ಥಾನಕ್ಕೆ ಮತ್ತು ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದೇನೆ” ಎಂದು ಜಸ್ಟಿನ್ ಟ್ರುಡೊ ಒಟ್ಟಾವಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ಆಂತರಿಕ ಕಲಹಗಳು” ಮುಂದಿನ ಚುನಾವಣೆಯಲ್ಲಿ “ಅತ್ಯುತ್ತಮ ಆಯ್ಕೆಯಾಗಲು ಸಾಧ್ಯವಿಲ್ಲ” ಎಂದು ಟ್ರೂಡೊ ಹೇಳಿದ್ದು, ಲಿಬರಲ್ ಪಕ್ಷದ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ತಾವು ಪ್ರಧಾನಿಯಾಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಟ್ರುಡೋ ಹೇಳಿದ್ದೇನು?
ಪಕ್ಷದೊಳಗಿನ ಆಂತರಿಕ ಕದನಗಳಿಂದಾಗಿ ರಾಜೀನಾಮೆ ನೀಡುವ ನಿರ್ಧಾರ ಕೈಗೊಳ್ಳಲಾಯಿತು. ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥ ಪಿಯರ್ ಪೊಯ್ಲಿವ್ರೆ ತಮ್ಮ ಉತ್ತರಾಧಿಕಾರಿಯಾಗಲು ಉತ್ಸಾಹಿಯಾಗಿದ್ದಾರೆ. ಆದ್ರೆ ಕೆನಡಾವನ್ನು ಮುನ್ನಡೆಸಲು ಆತ ಸರಿಯಾದ ವ್ಯಕ್ತಿಯಲ್ಲ ಎಂದು ಜಸ್ಟಿನ್ ಟ್ರುಡೋ ಹೇಳಿದ್ದಾರೆ.
ಟ್ರುಡೋ ಅವರು 2013 ರಲ್ಲಿ ಲಿಬರಲ್ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಅಕ್ಟೋಬರ್ ಅಂತ್ಯದಲ್ಲಿ ಕೆನಡಾದಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಲಿಬರಲ್ ಪಕ್ಷ ಹೀನಾಯವಾಗಿ ಸೋಲಲಿದೆ ಎಂದು ಸಮೀಕ್ಷೆಗಳು ಈಗಾಗಲೇ ಭವಿಷ್ಯ ನುಡಿದಿವೆ. ಇತ್ತೀಚಿನ ಚುನಾವಣೆಗಳಲ್ಲಿ ಲಿಬರಲ್ ಪಕ್ಷದ ಕಳಪೆ ಸಾಧನೆಗೆ ಟ್ರುಡೋ ಅವರ ನಾಯಕತ್ವವೇ ಕಾರಣ ಎಂದು ಸದಸ್ಯರು ಬಹಿರಂಗವಾಗಿಯೇ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಟ್ರುಡೋ ಪ್ರತಿನಿಧಿಸುತ್ತಿರುವ ಲಿಬರಲ್ ಪಕ್ಷದ ಸಂಸದರೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ತಿರುಗಿಬಿದ್ದು, ರಾಜೀನಾಮೆಗೆ ಆಗ್ರಹಿಸಿದ್ದರು.
ಅಲ್ಲದೇ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಜಸ್ಟಿನ್ ಟ್ರುಡೋ ನೇರವಾಗಿ ಆರೋಪಿಸಿದ್ದರು. ಆದರೆ ಅಕ್ಟೋಬರ್ 16 ರಂದು ನಾವು ಯಾವುದೇ ಪುರಾವೆಯನ್ನು ಭಾರತಕ್ಕೆ ನೀಡಿಲ್ಲ ಎಂದು ಟ್ರುಡೋ ಅಧಿಕೃತವಾಗಿ ಒಪ್ಪಿಕೊಳ್ಳುವ ಮೂಲಕ ಸೆಲ್ಫ್ ಗೋಲ್ ಹೊಡೆದಿದ್ದರು. ಇದರಿಂದಾಗಿ ಕೆನಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸುವಂತಾಗಿತ್ತು. ಖಲಿಸ್ತಾನಿ ಪರ ಟ್ರುಡೋ ಬ್ಯಾಟಿಂಗ್ ಮಾಡುತ್ತಿರುವುದಕ್ಕೆ ಸ್ವಪಕ್ಷೀಯರಿಂದಲೇ ಆಕ್ಷೇಪ ವ್ಯಕ್ತವಾಗಿತ್ತು.