ಹಾಸನ: ರಾಜ್ಯದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಎತ್ತನಹೊಳೆ ಯೋಜನೆಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಚಾಲನೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡನಗರದ ವಿತರಣಾ ತೊಟ್ಟಿ 3ರಲ್ಲಿ ನೀರೆತ್ತುವ ಪಂಪ್ ಹಾಗೂ ಮೋಟಾರ್ಗಳನ್ನು ಆನ್ ಮಾಡುವ ಮೂಲಕ ಮುಖ್ಯಮಂತ್ರ ಸಿದ್ದರಾಮಯ್ಯ ಅವರು, ಯೋಜನೆಯ ಮೊದಲ ಹಂತವನ್ನು ಲೋಕಾರ್ಪಣೆಗೊಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಥ್ ನೀಡಿದರು. ಅಲ್ಲದೇ ಇದೇ ವೇಳೆ ಏಳು ಸಚಿವರಿಂದ ದೊಡ್ಡನಗರದಲ್ಲೇ ನೀರನ್ನೆತ್ತುವ ಏಳು ವಿಯರ್ಗಳಿಗೂ ಚಾಲನೆ ನೀಡಲಾಯಿತು.
ಇದಕ್ಕೂ ಮೊದಲು ಬೆಳಗ್ಗೆ 8.30ರಿಂದ ಉದ್ಘಾಟನಾ ಸ್ಥಳದಲ್ಲಿ ಹೋಮ ಹವನ ನೆರವೇರಿತು. ಕಾರ್ಯಕ್ರಮದ ಉಸ್ತುವಾರಿಯನ್ನು ಜಲಸಂಪನ್ಮೂಲ ಇಲಾಖೆ ಸಚಿವ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಹಿಸಿದ್ದರು.
2026-27 ರೊಳಗೆ ಎತ್ತಿನಹೊಳೆ ಯೋಜನೆ ಪೂರ್ಣ :
ಎತ್ತಿನಹೊಳೆ ಯೋಜನೆಯನ್ನು ರೊಳಗೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನೆಯನ್ನು ಚಿಕ್ಕಬಳ್ಳಾಪುರದಲ್ಲಿ ತಾನೇ ನಿರ್ವಹಿಸಿ, ಇಂದು ಮೊದಲನೇ ಹಂತದ ಯೋಜನೆಯನ್ನು ಸಂತೋಷದಿಂದ ಉದ್ಘಾಟಸುತ್ತಿದ್ದೇನೆ ಎಂದರು.
ಈ ಯೋಜನೆಯ ಪರಿಷ್ಕೃತ ಅಂದಾಜು 23,252 ಕೋಟಿ ರೂ.ಗಳಾಗಿದ್ದು, ಇದುವರೆಗೆ 16,152ಕೋಟಿ ರೂ.ಗಳನ್ನು ವೆಚ್ಚವಾಗಿದ್ದು, ಇನ್ನುಳಿದ 6-7 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.