ಹೊಸಪೇಟೆ : ತುಂಗಭದ್ರಾ ಜಲಾಶಯಕ್ಕೆ ಹಾನಿಯಾಗಿ ಅಪಾರ ಪ್ರಮಾಣ ನೀರು ನದಿಗೆ ಹರಿದು ಹೋಗುತ್ತಿದ್ದು, ಭಾನುವಾರ ಒಂದು ದಿನದಲ್ಲಿ ಡ್ಯಾಂನಿಂದ ಬರೋಬ್ಬರಿ 8 ಟಿಎಂಸಿ ನೀರು ಖಾಲಿಯಾಗಿದೆ. ಶನಿವಾರ ಸಂಜೆ ವೇಳೆ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಆ ದಿನ ತಡರಾತ್ರಿ ಡ್ಯಾಂನ 19 ನೇ ಗೇಟ್‌ಗೆ ಹಾನಿಯಾಗಿತ್ತು. ಆ ಬಳಿಕ ಆ ಗೇಟ್ ಒಂದರಿಂದಲೇ ಬರೋಬ್ಬರಿ 35 ಸಾವಿರ ಕ್ಯೂಸೆಕ್ಸ್ ನೀರು ಹರಿದು ಹೋಗುತ್ತಿತ್ತು. ಸದ್ಯ ಆ ಗೇಟ್ ರಿಪೇರಿ ಮಾಡಬೇಕಿದೆ. ಈ ಹಿನ್ನೆಲೆ ಜಲಾಶಯದಿಂದ ಹೆಚ್ಚಿನ ನೀರು ಹೊರಗಡೆ ಬಿಡಲಾಗುತ್ತಿದೆ.
ತುಂಗಭದ್ರಾ ಜಲಾಶಯದ ಗರಿಷ್ಠ ನೀರಿನಮಟ್ಟ 105.8 ಟಿಎಂಸಿ. ಸದ್ಯ ಒಂದೇ ದಿನಕ್ಕೆ 8 ಟಿಎಂಸಿ ಖಾಲಿಯಾಗಿದ್ದು, ಸದ್ಯ 97.8 ಟಿಎಂಸಿಯಷ್ಟು ನೀರು ಜಲಾಶಯದಲ್ಲಿ ಇದೆ. ಜಲಾಶಯದ ಗರಿಷ್ಠ ಎತ್ತರ 497 ಮೀಟರ್ ಗಿದ್ದು, ಸದ್ಯ ಒಂದು ಮೀಟರ್‌ನಷ್ಟು ನೀರು ತಗ್ಗಿದೆ. ಇನ್ನು ಡ್ಯಾಂ ಒಳಹರಿವು ತಗ್ಗಿದ್ದು, 25 ಸಾವಿರ ಕ್ಯೂಸೆಕ್ಸ್ ಇದೆ.
ಸೋಮವಾರ ಬೆಳಿಗ್ಗೆಯಿಂದ ನದಿಗೆ ಬಿಡುಗಡೆ ಮಾಡುತ್ತಿರುವ ನೀರಿನ ಮಟ್ಟವನ್ನು ದುಪ್ಪಟ್ಟು ಹೆಚ್ಚಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ನದಿಗೆ 1 ಲಕ್ಷ 50 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತದೆ ಎಂದು ತುಂಗಭದ್ರಾ ಬೋರ್ಡ್ ತಿಳಿಸಿದೆ.
ನದಿಗೆ ಬಿಡುಗಡೆ ಮಾಡುತ್ತಿರುವ ನೀರಿನಮಟ್ಟ ಹೆಚ್ಚಳ ಮಾಡಿದ ಹಿನ್ನೆಲೆ ಕೊಪ್ಪಳ, ವಿಜಯನಗರ, ರಾಯಚೂರು, ಬಳ್ಳಾರಿ ಜಿಲ್ಲೆಗಳ ನದಿ ಹಾಗೂ ಕಾಲುವೆಗಳ ಸಮೀಪ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ. ಒಮ್ಮೆಗೆ ದುಪ್ಪಟ್ಟು ನೀರು ಹರಿದುಬರುವುದರಿಂದ ನದಿಗೆ ತೆರಳಬಾರದು. ತಗ್ಗು ಪ್ರದೇಶ, ಮುಳುಗಡೆ ಪ್ರದೇಶದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಆಯಾ ಜಿಲ್ಲಾಡಳಿತಗಳು ಕೋರಿವೆ.
ಹೆಚ್ಚು ನೀರು ಬಿಡುಗಡೆ ಮಾಡುತ್ತಿರುವುದರಿಂದ ಈಗಾಗಲೇ ಆನೆಗುಂದಿಯ ಪುರಾತನ ಇಲಾಖೆ ಸ್ಮಾರಕಗಳು ಮುಳುಗಡೆಯಾಗಿವೆ. ಇನ್ನು ಹಂಪಿ ಸಮೀಪದ ಸ್ಮಾರಕಗಳಿಗೂ ನದಿ ಪ್ರವಾಹದ ಬಿಸಿ ತಟ್ಟಲಿದೆ.

