ಮಡಿಕೇರಿ, ಏಪ್ರಿಲ್ 05: ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇರಳ ಮೂಲದ ಯುವತಿ ನಾಪತ್ತೆಯಾಗಿ ಮೂರು ದಿನ ಕಳೆದರೂ ಆಕೆಯ ಸುಳಿವು ಇನ್ನೂ ಪತ್ತೆಯಾಗಿಲ್ಲ.
ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿರುವ, ಕೇರಳದ ಕೋಯಿಕ್ಕೋಡ್ ನಿವಾಸಿ 35 ವರ್ಷದ ಶರಣ್ಯಾ, ಕಕ್ಕಬ್ಬೆ ಗ್ರಾಮದ ಹೋಂಸ್ಟೇಯೊಂದರಲ್ಲಿ ತಂಗಿದ್ದು, ಅಲ್ಲಿಂದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದರು. ಬೆಳಗ್ಗೆ 8.30ರ ಸುಮಾರಿಗೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಗೆ ಬಂದಿದ್ದ ಶರಣ್ಯಾಳನ್ನು, ಒಬ್ಬರನ್ನೇ ಟ್ರೆಕ್ಕಿಂಗ್‌ಗೆ ಬಿಡದ ನಿಯಮದ ಹಿನ್ನೆಲೆಯಲ್ಲಿ ಮತ್ತೊಂದು ತಂಡದೊಂದಿಗೆ ಕಳುಹಿಸಲಾಗಿತ್ತು.
ಸಾಮಾನ್ಯವಾಗಿ ಟ್ರೆಕ್ಕಿಂಗ್‌ಗೆ ತೆರಳಿದವರು ಮಧ್ಯಾಹ್ನ 1.30ರೊಳಗೆ ಚೆಕ್‌ಪೋಸ್ಟ್‌ಗೆ ಮರಳಬೇಕಾಗಿದ್ದರೂ, ಶರಣ್ಯಾ ವಾಪಸ್ ಬಾರದ ಹಿನ್ನೆಲೆಯಲ್ಲಿ ಹೋಂಸ್ಟೇ ಮಾಲೀಕರು ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಮೊದಲಿಗೆ ಕರೆ ಸಂಪರ್ಕವಾಗದೇ ಇದ್ದು, ಬಳಿಕ ಕರೆ ಸ್ವೀಕರಿಸಿದ ಶರಣ್ಯಾ ತಾನು ದಾರಿ ತಪ್ಪಿದ್ದೇನೆ ಎಂದು ತಿಳಿಸಿದ್ದಾಳೆ. ಆದರೆ ತಕ್ಷಣವೇ ಕರೆ ಕಡಿತಗೊಂಡಿದ್ದು, ಬಳಿಕ ಫೋನ್ ಸಂಪರ್ಕ ಸಾಧ್ಯವಾಗಿಲ್ಲ.
ಘಟನೆಯ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ ಮೂರು ದಿನಗಳಿಂದ ನಿರಂತರ ಶೋಧ ನಡೆಸಿದರೂ ಶರಣ್ಯಾಳ ಯಾವುದೇ ಸುಳಿವು ಸಿಕ್ಕಿಲ್ಲ.
ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ನಕ್ಸಲ್ ನಿಗ್ರಹ ಪಡೆ ಸೇರಿ 60ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದಾರೆ. ಸ್ಥಳೀಯರೂ ಶೋಧ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.
ವಿಶೇಷವೆಂದರೆ, ಶರಣ್ಯಾ ಕಳೆದ 15 ವರ್ಷಗಳಿಂದ ಟ್ರೆಕ್ಕಿಂಗ್ ಅನುಭವ ಹೊಂದಿರುವುದರಿಂದ, ಆಕೆ ದಾರಿ ತಪ್ಪಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಕಾಡು ಪ್ರಾಣಿಗಳ ದಾಳಿ ನಡೆದಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಇದಲ್ಲದೆ, ಟ್ರೆಕ್ಕಿಂಗ್ ದಾರಿ ಸ್ಪಷ್ಟವಾಗಿರುವುದರಿಂದ ಅನುಭವ ಹೊಂದಿದವರು ದಾರಿ ತಪ್ಪುವುದು ಅಪರೂಪ. ಇದೇ ವೇಳೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನ ಸಿಸಿಟಿವಿ ಕಾರ್ಯನಿರ್ವಹಿಸದಿರುವುದು ಪ್ರಕರಣದ ಸುತ್ತ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಪ್ರಸ್ತುತ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಶರಣ್ಯಾಳ ಪತ್ತೆಗೆ ಅಧಿಕಾರಿಗಳು ಎಲ್ಲಾ ರೀತಿಯ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ.

