ಟೆಹ್ರಾನ್: ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಇಸ್ರೇಲ್ ಸೇನಾ ಪಡೆಯು ಟೆಹ್ರಾನ್ ಮೇಲೆ ನಡೆಸಿದ ಜಂಟಿ ವಾಯುದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇರಾನ್ ಸರ್ಕಾರ ಅಧಿಕೃತ ಘೋಷಣೆ ಮಾಡುವುದಕ್ಕೂ ಮುನ್ನವೇ ಅಮೆರಿಕ ಈ ವಿಷಯವನ್ನು ದೃಢಪಡಿಸಿದ್ದಾಗಿ ತಿಳಿದುಬಂದಿದೆ.
ಶನಿವಾರ ಬೆಳಗ್ಗೆ ಆರಂಭವಾದ ತೀವ್ರ ದಾಳಿಯಲ್ಲಿ ಖಮೇನಿ ಸೇರಿದಂತೆ ಅವರ ಮಗಳು, ಮೊಮ್ಮಗಳು, ಸೊಸೆ ಮತ್ತು ಅಳಿಯ ಸೇರಿದಂತೆ ಕುಟುಂಬದ ಹಲವು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆಯಿಂದ ಇರಾನ್‌ನಲ್ಲಿ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಚರ್ಚೆ ಗರಿಗೆದರಿದೆ.
1989ರಿಂದ ಇರಾನ್‌ನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದ ಖಮೇನಿ ಅವರು ತಮ್ಮ ಜೀವಿತಾವಧಿಯಲ್ಲಿ ಉತ್ತರಾಧಿಕಾರಿಯನ್ನು ಘೋಷಿಸಿರಲಿಲ್ಲ. ಇದೀಗ ಅವರ ನಿಧನದ ಹಿನ್ನೆಲೆ ಉತ್ತರಾಧಿಕಾರಿಯಾಗಿ ಐವರ ಹೆಸರುಗಳು ಕೇಳಿಬರುತ್ತಿವೆ.
ಐವರು ಪ್ರಮುಖ ಹೆಸರುಗಳು
ಅಯತೊಲ್ಲಾ ಅಲಿರೆಜಾ ಅರಾಫಿ: ಹಿರಿಯ ಧರ್ಮಗುರು ಹಾಗೂ ಗಾರ್ಡಿಯನ್ ಕೌನ್ಸಿಲ್ ಸದಸ್ಯರಾಗಿರುವ ಇವರನ್ನು ಪ್ರಮುಖ ಉತ್ತರಾಧಿಕಾರಿಯಾಗಿ ಪರಿಗಣಿಸಲಾಗುತ್ತಿದೆ.
ಮೊಹ್ಸೆನ್ ಕೋಮಿ: ಖಮೇನಿ ಅವರ ಉನ್ನತ ಮಟ್ಟದ ಸಲಹೆಗಾರರಾಗಿದ್ದ ಇವರನ್ನು ಆಡಳಿತದ ಆಂತರಿಕ ವಲಯದಲ್ಲಿ ವಿಶ್ವಾಸಾರ್ಹ ವ್ಯಕ್ತಿಯಾಗಿ ಗುರುತಿಸಲಾಗಿದೆ. ಆಡಳಿತದಲ್ಲಿ ನಿರಂತರತೆ ತರಲು ಇವರ ಆಯ್ಕೆ ಸೂಕ್ತ ಎನ್ನಲಾಗಿದೆ.
ಅಯತೊಲ್ಲಾ ಮೊಹ್ಸೆನ್ ಅರಕಿ: ತಜ್ಞರ ಸಭೆಯ ಪ್ರಮುಖ ಸದಸ್ಯರಾಗಿರುವ ಇವರು ಧಾರ್ಮಿಕ ಪಾಂಡಿತ್ಯದಿಂದಲೇ ಗುರುತಿಸಿಕೊಂಡಿದ್ದಾರೆ.
ಮೊಹ್ಸೆನಿ-ಎಜೆಯಿ: ಪ್ರಸ್ತುತ ನ್ಯಾಯಾಂಗದ ಮುಖ್ಯಸ್ಥರಾಗಿರುವ ಇವರು ಭದ್ರತೆ ಹಾಗೂ ಕಾನೂನು ವ್ಯವಸ್ಥೆಯಲ್ಲಿ ಅನುಭವ ಹೊಂದಿದ್ದಾರೆ. ಆಡಳಿತ ಪರಿವರ್ತನೆ ಸಂದರ್ಭದಲ್ಲಿ ಇವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಅಯತೊಲ್ಲಾ ಹಶೀಮ್ ಹೊಸೇನಿ ಬುಶೆಹ್ರಿ: ತಜ್ಞರ ಸಭೆಯ ಸದಸ್ಯರಾಗಿರುವ ಇವರು ಸಾಂಪ್ರದಾಯಿಕ ಧಾರ್ಮಿಕ ನಿಲುವುಗಳಿಂದ ಗಮನಸೆಳೆದಿದ್ದಾರೆ.
ಖಮೇನಿ ಅವರ ಸಾವನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ದೃಢಪಡಿಸಿರುವುದಾಗಿ ವರದಿಯಾಗಿದೆ. ಇದೇ ವೇಳೆ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಘೋಷಿಸಲಾಗಿದೆ. ಈ ದಾಳಿ ಧಾರ್ಮಿಕ, ನೈತಿಕ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಎಂದು ಇರಾನ್ ಆರೋಪಿಸಿದೆ.
ಈ ಬೆಳವಣಿಗೆಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಇರಾನ್ ವಾಯು ಪ್ರದೇಶದೊಳಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದ್ದು, ಹಲವು ದೇಶಗಳಿಗೆ ಸಾಗುವ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.

