ಕಿಚ್ಚ್ ಸುದೀಪ್ ಅವರ ಅಭಿಮಾನಿಗಳು ಹಲವು ತಿಂಗಳಿನಿಂದ ಕಾತುರದಿಂದ ಕಾಯುತ್ತಿದ್ದ ಬಹು ನಿರೀಕ್ಷಿತ ಮ್ಯಾಕ್ಸ್ ಚಿತ್ರದ ರಿಲೀಸ್ ಡೇಟ್ ಕೊನೆಗೂ ಘೋಷಣೆಯಾಗಿದೆ. ಡಿಸೆಂಬರ್ 25 ತೆರೆಮೇಲೆ ಕಿಚ್ಚನ ಆರ್ಭ್ಭತ ಶುರುವಾಗುವ ಸಿಹಿಸುದ್ದಿಯನ್ನು ನಿರ್ಮಾಪಕರು ನೀಡಿದ್ದಾರೆ. ಸಣ್ಣ ಟೀಸರ್ ಸಮೇತ ಅಭಿಮಾನಿಗಳಿಗೆ ಚಿತ್ರತಂಡ ಸರ್‌ಪ್ರೈಸ್ ನೀಡಿದೆ. ಈ ವರ್ಷವೇ ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ.
ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್ ಸಂಭ್ರಮದಲ್ಲಿ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಲಿದೆ. ಅಧಿಕೃತವಾಗಿ ಈ ವಿಚಾರವನ್ನು ಚಿತ್ರತಂಡ ಟೀಸರ್ ಸಮೇತ ಘೋಷಣೆ ಮಾಡಿದೆ. ಈ ಸುದ್ದಿ ಕೇಳಿದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಅದ್ದೂರಿ ಬಜೆಟ್ನಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾದಲ್ಲಿ ತುಂಬ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. 2022ರ ಜುಲೈನಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ತೆರೆಕಂಡಿತ್ತು. ಆ ಬಳಿಕ ಸುದೀಪ್ ಅಭಿನಯದ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಇಷ್ಟು ದೊಡ್ಡ ಗ್ಯಾಪ್ ಆಗಿದ್ದಕ್ಕೆ ಸುದೀಪ್ ಅವರ ಅಭಿಮಾನಿಗಳಿಗೆ ಬೇಸರ ಇದೆ. ‘ವಿಕ್ರಾಂತ್ ರೋಣ’ ಬಳಿಕ ಸುದೀಪ್ ಒಪ್ಪಿಕೊಂಡ ಸಿನಿಮಾ ‘ಮ್ಯಾಕ್ಸ್’. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು. ಆದರೆ ಒಂದಷ್ಟು ಕಾರಣಗಳಿಂದಾಗಿ ಸಿನಿಮಾದ ಬಿಡುಗಡೆ ತಡವಾಯಿತು.
ಇನ್ನು ಚಿತ್ರದಲ್ಲಿ ಸುದೀಪ್ ಭರ್ಜರಿ ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಈ ಟೀಸರ್ ಸಾಕ್ಷಿ. ಆ್ಯಕ್ಷನ್ ದೃಶ್ಯಗಳು ಮೈಜುಂ ಎನ್ನಿಸುವಂತಿದ್ದು, ಅಭಿಮಾನಿಗಳ ಕಣ್ಮನ ಸೆಳೆದಿದೆ. ಟೀಸರ್‌ನ ಕೊನೆಯಲ್ಲಿ ಬರುವ ಸುದೀಪ್ ಡ್ಯಾನ್ಸ್ ದೃಶ್ಯವು ಥಿಯೇಟರ್‌ನಲ್ಲಿ ಫ್ಯಾನ್ಸ್‌ಗೆ ಭರ್ಜರಿ ಟ್ರೀಟ್ ಕೊಡುವಂತಿದೆ.
ಈ ಚಿತ್ರದಲ್ಲಿ ಸುದೀಪ್ ಜೊತೆ ವರಲಕ್ಷ್ಮೀ ಶರತ್‌ಕುಮಾರ್, ತೆಲುಗು ನಟ ಸುನೀಲ್, ಶರತ್ ಲೋಹಿತಾಶ್ವ, ‘ಕಾಲಕೇಯ’ ಪ್ರಭಾಕರ್, ಪ್ರಮೊದ್ ಶೆಟ್ಟಿ, ನರೇನ್, ಸಂಯಕ್ತಾ ಹೊರನಾಡು ಮುಂತಾದವರು ನಟಿಸಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್.ತನು ಅವರ ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬರೋಬ್ಬರಿ 50 ಕೋಟಿ ಬಜೆಟ್ನಲ್ಲಿ ಮ್ಯಾಕ್ಸ್ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸುದೀಪ್ ಚಿತ್ರದಲ್ಲಿ ಅಭಿನಯ ಅಷ್ಟೇ ಅಲ್ಲ, ಬಂಡವಾಳ ಹೂಡಿರುವ ಕಾರಣ ಚಿತ್ರದ ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಾಗಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಡಿಸೆಂಬರ್ 20ಕ್ಕೆ ಉಪ್ಪಿಯ ‘ಯುಐ’ ಸಿನಿಮಾ ತೆಗೆ.
ಉಪೇಂದ್ರ ನಿರ್ದೇಶಿಸಿ ನಟಿಸಿರುವ ‘ಯುಐ’ ಸಿನಿಮಾ ಡಿಸೆಂಬರ್ 20ಕ್ಕೆ ತೆರೆಗೆ ಬರಲಿದೆ. ‘ಮ್ಯಾಕ್ಸ್’ ಹಾಗೂ ‘ಯುಐ’ ಎರಡೂ ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳು. ಹಾಗಾಗಿ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಕರ್ನಾಟಕದಲ್ಲಿ ಅಂತೂ ಸುದೀಪ್ ಹಾಗೂ ಉಪೇಂದ್ರ ಇಬ್ಬರಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಾಗಿ ಎರಡೂ ಚಿತ್ರಗಳಿಗೆ ಹೇಗೆ ಪ್ರತಿಕ್ರಿಯೆ ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

