ಪ್ಯೊಂಗ್ಯಾಂಗ್: ಚಗಾಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಭಾರೀ ಮಳೆ ಮತ್ತು ಭೂಕುಸಿತಗಳು ಹಲವಾರು ಸಾವು-ನೋವುಗಳಿಗೆ ಕಾರಣವಾಗಿತ್ತು. ನೂರಾರು ಸಂಖ್ಯೆಯಲ್ಲಿ ಜನರು ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರಾದರು. ಪ್ರವಾಹದಲ್ಲಿ ಜನರ ಸಾವನ್ನು ತಡೆಗಟ್ಟುವಲ್ಲಿ ವಿಫಲರಾದ ಸುಮಾರು 30 ಸರ್ಕಾರಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಆದೇಶ ಹೊರಡಿಸಿದ್ದಾರೆ ಎಂದು ದಕ್ಷಿಣ ಕೊರಿಯಾ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಕಳೆದ ತಿಂಗಳ ಕೊನೆಯಲ್ಲಿ ಪ್ರವಾಹ ಪೀಡಿತ ಪ್ರದೇಶದ 20 ರಿಂದ 30 ಅಧಿಕಾರಿಗಳನ್ನು ಏಕಕಾಲದಲ್ಲಿ ಗಲ್ಲಿಗೇರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉತ್ತರ ಕೊರಿಯಾ ದೇಶದೊಳಗಿನ ಬೆಳವಣಿಗೆಗಳನ್ನು ಗೌಪ್ಯವಾಗಿಡುತ್ತದೆ. ಹೀಗಾಗಿ, ಅಧಿಕಾರಿಗಳ ಗಲ್ಲಿಗೇರಿಸುವ ವಿವರಗಳನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ. ಆದರೆ ಉತ್ತರ ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್‌ಎ) ಸುದ್ದಿಯನ್ನು ವರದಿ ಮಾಡಿದೆ.
ಸಿನುಯಿಜುನಲ್ಲಿ ನಡೆದ ತುರ್ತು ಪೊಲಿಟಿಬ್ಯೂರೋ ಸಭೆಯಲ್ಲಿ ನಾಯಕ ಕಿಮ್ ಜಾಂಗ್ ಉನ್, ವಿಪತ್ತು ತಡೆಗಟ್ಟುವ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಅಪಾರ ಸಾವು-ನೋವುಗಳಾಗಿವೆ ಕಾರಣರಾದವರನ್ನು ಕಟ್ಟುನಿಟ್ಟಾಗಿ ಶಿಕ್ಷಿಸಿ ಎಂದು ಆದೇಶ ಹೊರಡಿಸಿದ್ದಾರೆ.
ಸ್ವೀಕಾರಾರ್ಹವಲ್ಲದ ಜೀವಹಾನಿಗೆ ಕಾರಣರಾದವರು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾದ ಅಧಿಕಾರಿಯನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.