ನವದೆಹಲಿ: ಹಂಗೇರಿ-ಅಮೆರಿಕನ್ ಉದ್ಯಮಿ ಜಾರ್ಜ್ ಸೊರೊಸ್ ಅವರ ಸಂಸ್ಥೆಯ ಜೊತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನಂಟು ಬಹಳ ಗಂಭೀರ ವಿಚಾರ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ಧ. ಭಾರತ ವಿರೋಧಿಗಳ ವಿರುದ್ಧ ದೇಶದ ನಾಗರಿಕರು ಒಗ್ಗಟ್ಟಿನಿಂದ ಇರಬೇಕೆಂದು ಅವರು ಮನವಿ ಮಾಡಿದರು. ಜಾರ್ಜ್ ಸೊರೊಸ್ ವಿಚಾರವನ್ನು ಈಗಾಗಲೇ ನಾವು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ್ದೇವೆ. ಸೊರೊಸ್ ಭಾರತದ ವಿರುದ್ಧ ಕೆಲಸ ಮಾಡುವ ವ್ಯಕ್ತಿ ಎಂದು ದೂರಿದರು.
ಸೊರೊಸ್ ಸಂಸ್ಥೆಯ ಜೊತೆ ಸೋನಿಯಾ ಗಾಂಧಿ ಅವರಿಗೆ ನಂಟು ಇದೆ ಎಂದು ಬಿಜೆಪಿ ಆರೋಪಿಸಿದ್ದಕ್ಕೆ ಸೋಮವಾರದ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದರು. ಎರಡು ಕಡೆಯಿಂದ ಘೋಷಣೆ ಕೂಗಿದ ಬೆನ್ನಲ್ಲೇ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜಾರ್ಜ್ ಸೊರೋಸ್ ಫೌಂಡೇಶನ್‌ನಿಂದ ಹಣಕಾಸು ನೆರವು ಪಡೆಯುವ ಹಾಗೂ ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗುವುದನ್ನು ಬೆಂಬಲಿಸಿದ ಸಂಸ್ಥೆಯೊಂದಿಗೆ ನಂಟು ಹೊಂದಿದ್ದಾರೆ.
ಸೊರೋಸ್‌ರಿಂದ ನೆರವು ಪಡೆಯುವ ‘ಫೋರಂ ಆಫ್ ಡಿ ಡೆಮಾಕ್ರಟಿಕ್ ಲೀಡರ್ಸ್ ಇನ್ ಏಷ್ಯಾ ಪೆಸಿಫಿಕ್’ ಸಂಸ್ಥೆ ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವಾಗಿ ಪರಿಗಣಿಸುತ್ತದೆ. ಸೋನಿಯಾ ಗಾಂಧಿ ಇದರ ಸಹ ಅಧ್ಯಕ್ಷೆಯಾಗಿದ್ದಾರೆ. ಇದು ಭಾರತದ ಆಂತರಿಕ ವಿಷಯಗಳಲ್ಲಿ ವಿದೇಶಿ ಕಂಪನಿಗಳ ಪ್ರಭಾವವನ್ನು ತೋರಿಸುತ್ತದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸೊರೋಸ್‌ರನ್ನು ಹಳೆಯ ಮಿತ್ರ ಎಂದು ಕರೆದಿದ್ದ ಪೋಸ್ಟ್ ಅನ್ನು ಹಾಕಿದೆ. ಅದಾನಿ ಕುರಿತು ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯನ್ನು ಜಾರ್ಜ್ ಸೊರೊಸ್ ಅವರ ಒಸಿಸಿಆರ್‌ಪಿ ನೇರ ಪ್ರಸಾರ ಮಾಡಿದೆ. ಇದು ಅವರ ಅಪಾಯಕಾರಿ ಸಂಬಂಧವನ್ನು ತಿಳಿಸುತ್ತದೆ. ಭಾರತೀಯ ಆರ್ಥಿಕತೆಯನ್ನು ಹಳಿತಪ್ಪಿಸುವ ಅವರ ಪ್ರಯತ್ನಗಳನ್ನು ಇದು ಎತ್ತಿ ತೋರಿಸುತ್ತದೆ.