ಬೆಂಗಳೂರು, ಡಿ.29: ಕೋಗಿಲು ಬಡಾವಣೆ ತ್ಯಾಜ್ಯ ವಿಲೇವಾರಿ ಜಾಗದ ಅಕ್ರಮ ಒತ್ತುವರಿ ಪ್ರಕರಣದಲ್ಲಿ ನಿರಾಶ್ರಿತರಾಗಿರುವ ಅರ್ಹರು ಹಾಗೂ ಸ್ಥಳೀಯರಿಗೆ ಪುನರ್ವಸತಿ ಕಲ್ಪಿಸಲಾಗುವುದು. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳನ್ನು ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಭಾನುವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೋಗಿಲು ಅಕ್ರಮ ಮನೆ ತೆರವು ಸಂಬಂಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರ ಟ್ವೀಟ್ ವಿಚಾರವಾಗಿ ಬಿಜೆಪಿ ನಡೆಸುತ್ತಿರುವ ಟೀಕೆಗೆ ಉತ್ತರಿಸಿದರು.
“ವೇಣುಗೋಪಾಲ್ ಅವರು ನಮ್ಮ ಆಡಳಿತದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದು, ನಮಗೆ ಸಲಹೆ ನೀಡಲು ಸಂಪೂರ್ಣ ಅಧಿಕಾರ ಹೊಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರು ಬಂದು ತಮ್ಮ ರಾಜ್ಯ ನಾಯಕರಿಗೆ ಸಲಹೆ ನೀಡುವುದಿಲ್ಲವೇ? ನಮ್ಮದು ರಾಷ್ಟ್ರೀಯ ಪಕ್ಷ. ನಮಗೆ ನಮ್ಮದೇ ಜವಾಬ್ದಾರಿ ಇದೆ” ಎಂದು ಹೇಳಿದರು.
ಈ ಪ್ರಕರಣದಲ್ಲಿ ಜಾತಿ ಅಥವಾ ಧರ್ಮ ಆಧಾರಿತ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಅಕ್ರಮವಾಗಿ ಶೆಡ್‌ಗಳನ್ನು ಹಾಕಿಕೊಂಡವರಲ್ಲಿ ಯಾವ ಸಮುದಾಯದವರು ಎಷ್ಟು ಮಂದಿ ಇದ್ದರು ಎಂಬ ಮಾಹಿತಿಯನ್ನು ನಾನು ಪಡೆದುಕೊಂಡಿದ್ದೇನೆ. ಕಾನೂನು ಎಲ್ಲರಿಗೂ ಒಂದೇ. ಈ ಕುರಿತು ಮುಖ್ಯಮಂತ್ರಿ ನಾಳೆ ಸಭೆ ಕರೆದಿದ್ದಾರೆ. ನಾನು ನಡೆಸಿದ ಪರಿಶೀಲನೆಯಲ್ಲಿ, ಒಬ್ಬ ವ್ಯಕ್ತಿ ಜನರಿಂದ ಹಣ ಸಂಗ್ರಹಿಸಿ ಸರ್ಕಾರಿ ಜಾಗದಲ್ಲಿ ಶೆಡ್ ಹಾಕಿಕೊಳ್ಳಲು ಪ್ರೇರೇಪಿಸಿದ್ದಾನೆ ಎಂಬುದು ತಿಳಿದುಬಂದಿದೆ” ಎಂದು ತಿಳಿಸಿದರು.
ವೇಣುಗೋಪಾಲ್ ಅವರು ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಬಿಜೆಪಿ ನಾಯಕ ಅಶ್ವಥ್ ನಾರಾಯಣ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, “ಅವರ ಪಕ್ಷದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಹೀಗಾಗಿ ಸುದ್ದಿಯಲ್ಲಿ ಇರಲು ಕೆಲವರು ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ನೀವುಗಳು ಅವರಿಗೆ ಗೌರವ ಕೊಡುವುದರಿಂದ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಗಳಿಗೆ ನಾವು ಸೊಪ್ಪು ಹಾಕುವುದಿಲ್ಲ” ಎಂದು ಡಿಕೆಶಿ ತಿರುಗೇಟು ನೀಡಿದರು.

