ಬೆಂಗಳೂರು, ಜನವರಿ 8: ಕೋಗಿಲು ಲೇಔಟ್‌ನ (Kogilu Layout) ಅಕ್ರಮವಾಸಿಗಳಿಗೆ ಮನೆ ಭಾಗ್ಯ ಸಿಗುವ ಸಮಯ ಸಮೀಪಿಸುತ್ತಿದೆ. ಬಿಜೆಪಿ ನಾಯಕರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಅಕ್ರಮವಾಸಿಗಳಿಗೆ ಮನೆ ಹಂಚಲು ಮುಂದಾಗಿದ್ದು, ಇಂದೇ 26 ಮನೆಗಳ ಹಂಚಿಕೆ ನಡೆಯುವ ಸಾಧ್ಯತೆ ಇದೆ.
ಈ ಕುರಿತು ಮಾಹಿತಿ ನೀಡಿರುವ ವಸತಿ ಸಚಿವ ಜಮೀರ್ ಅಹ್ಮದ್ ಅವರು, “ಮೊದಲ ಹಂತದಲ್ಲಿ 26 ಮನೆಗಳನ್ನು ನೀಡಬಹುದು. ಉಳಿದ ಅರ್ಜಿಗಳ ಪರಿಶೀಲನೆ ಪ್ರಗತಿಯಲ್ಲಿದೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಮನೆ ಸಿಗುವುದಿಲ್ಲ. ಹೊರರಾಜ್ಯದವರಿಗಂತೂ ಮನೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಕೋಗಿಲು ನಿರಾಶ್ರಿತರ ಪಟ್ಟಿ ಬಿಡುಗಡೆ
ಕೋಗಿಲು ಲೇಔಟ್‌ನಲ್ಲಿ ಸಮೀಕ್ಷೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಅರ್ಹ ನಿರಾಶ್ರಿತರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಭಾಷಾವಾರು ವಿವರಗಳೊಂದಿಗೆ ಸರ್ಕಾರ ಪಟ್ಟಿ ಬಿಡುಗಡೆ ಮಾಡಿದೆ.
ಕೋಗಿಲು ನಿರಾಶ್ರಿತರ ಕುಟುಂಬಗಳ ಭಾಷಾವಾರು ಪಟ್ಟಿ:
ಕನ್ನಡ ಭಾಷಿಕರು – 108
ಉರ್ದು ಭಾಷಿಕರು – 103
ತಮಿಳು ಭಾಷಿಕರು – 13
ಹಿಂದಿ ಭಾಷಿಕರು – 11
ಮರಾಠಿ ಭಾಷಿಕರು – 03
ತೆಲುಗು ಭಾಷಿಕರು – 03
ಸರ್ಕಾರ 26 ಮನೆಗಳ ಹಂಚಿಕೆಗೆ ಸಿದ್ಧತೆ ಮಾಡಿಕೊಂಡಿದ್ದರೂ, ಕೋಗಿಲು ಲೇಔಟ್‌ನ ಕೆಲವು ನಿವಾಸಿಗಳು “ಬೇರೆ ವ್ಯಕ್ತಿಗಳಿಗೆ ಮನೆ ನೀಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ. ಕೆಲವರಿಗೆ ಮಾತ್ರ ಕರೆ ಬಂದಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.
ಪೊಲೀಸ್ ವಿಚಾರಣೆ, ಎಫ್‌ಐಆರ್
ಇದನ್ನಿಟ್ಟುಕೊಂಡು ಕೋಗಿಲು ಲೇಔಟ್‌ನ 20ಕ್ಕೂ ಹೆಚ್ಚು ನಿವಾಸಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯಾವಾಗ ಬಂದಿದ್ದರು, ಯಾರಿಗೆ ಎಷ್ಟು ಹಣ ನೀಡಿದ್ದರು, ವಿದ್ಯುತ್ ಸಂಪರ್ಕ ಹೇಗೆ ದೊರಕಿತು ಎಂಬ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸೈಟ್ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

