ಕೋಲಾರ ಜಿಲ್ಲೆ, ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ವರತನಹಳ್ಳಿ ಗ್ರಾಮದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ 35–40 ಕುರಿಗಳು ಸುಟ್ಟು ಕರಕಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ದುರಂತದಿಂದ ಗ್ರಾಮದ ರೈತ ತಿಮ್ಮಯ್ಯರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಮಧ್ಯರಾತ್ರಿ 2 ಗಂಟೆ ವೇಳೆಗೆ ತಿಮ್ಮಯ್ಯ ಅವರಿಗೆ ಸೇರಿದ ಕುರಿ ಶೆಡ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಶೀಘ್ರವಾಗಿ ವ್ಯಾಪಿಸಿದ ಪರಿಣಾಮ ಶೆಡ್‌ನಲ್ಲಿ ಇದ್ದ ಕುರಿಗಳು ಪಾರಾಗಲು ಸಾಧ್ಯವಾಗದೇ ಸಜೀವ ದಹನವಾಗಿವೆ. ಸ್ಥಳೀಯರು ತಕ್ಷಣ ಬೆಂಕಿ ನಂದಿಸಲು ಯತ್ನಿಸಿದರೂ ಪರಿಣಾಮಕಾರಿಯಾಗಲಿಲ್ಲ.
ಘಟನೆಯ ಬಗ್ಗೆ ಮಾತನಾಡಿದ ಗ್ರಾಮದ ಶ್ರೀನಿವಾಸ್ “ಆಕಸ್ಮಿಕ ಬೆಂಕಿಯಿಂದ ಸುಮಾರು 40 ಕುರಿಗಳು ಸಾವನ್ನಪ್ಪಿವೆ. ರೈತ ತಿಮ್ಮಯ್ಯ ಅವರಿಗೆ ದೊಡ್ಡ ಅನ್ಯಾಯವಾಗಿದೆ. ಸಂಬಂಧಪಟ್ಟ ಇಲಾಖೆಗಳು ಮುಂದಾಗಿಬಂದು ಪರಿಹಾರ ಒದಗಿಸಬೇಕು,” ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಇದಕ್ಕಾಗಿ ಮಾಹಿತಿ ಪಡೆದ ಶ್ರೀನಿವಾಸಪುರ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
— ವರದಿ: ಅರುಣ್ ಕುಮಾರ್

