ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದ್ದು, ಪಂದ್ಯಕ್ಕಿಂತ ಟಿಕೆಟ್ ವಿಚಾರವೇ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಶಾಸಕರಿಗೆ 1+1 ಟಿಕೆಟ್ ನೀಡಲು ಒಪ್ಪಿಕೊಂಡಿದೆ. ಪಂದ್ಯಕ್ಕೆ ಆಹ್ವಾನ ನೀಡುವ ಉದ್ದೇಶದಿಂದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ನೇತೃತ್ವದ ತಂಡವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿತು.
ಈ ವೇಳೆ ಸಿಎಂ ನಾಲ್ಕು ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದು, ಅದಕ್ಕೆ ಕೆಎಸ್‌ಸಿಎ ಸಮ್ಮತಿಸಿದೆ. ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿರುವ ಹಿನ್ನೆಲೆಯಲ್ಲಿ, ನಾಳಿನ ಪಂದ್ಯಕ್ಕೆ 1+1 ಟಿಕೆಟ್ ಮತ್ತು ಮುಂದಿನ ಪಂದ್ಯಗಳಿಗೆ ನಾಲ್ಕು ಟಿಕೆಟ್ ನೀಡುವ ಭರವಸೆ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಶಾಸಕರಿಗೆ ಟಿಕೆಟ್ ಕೇಳುವ ಹಕ್ಕು ಇದೆ, ಏಕೆಂದರೆ ಅವರು ಸರ್ಕಾರದ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ, ಈ ವಿಷಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ತಿರುಗೇಟು ನೀಡುತ್ತಾ, ತಮ್ಮ ಪಕ್ಷದ ನಾಯಕರಿಗೆ ಜ್ಞಾನ ನೀಡಲಿ ಎಂದು ವಾಗ್ದಾಳಿ ನಡೆಸಿದರು.
ಟಿಕೆಟ್ ಬೇಡಿಕೆ ತಪ್ಪಲ್ಲ:
ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಶಾಸಕರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಅಂತಿಮ ನಿರ್ಧಾರವನ್ನು RCB ಮತ್ತು KSCA ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸರ್ಕಾರ ಈ ವಿಷಯದಲ್ಲಿ ಎಷ್ಟು ಮಟ್ಟಿಗೆ ಭಾಗಿಯಾಗಬಹುದು ಎಂಬುದನ್ನು ಪರಿಶೀಲಿಸುತ್ತೇವೆ. ಇದುವರೆಗೆ ಸರ್ಕಾರ ಮಧ್ಯಪ್ರವೇಶಿಸಿಲ್ಲ. ದುರಂತದ ಹಿನ್ನೆಲೆ ಸಮಿತಿ ರಚಿಸಿ, ಅದರ ಶಿಫಾರಸುಗಳ ಆಧಾರದಲ್ಲಿ ಪಂದ್ಯಕ್ಕೆ ಅನುಮತಿ ನೀಡಿದ್ದೇವೆ” ಎಂದರು.

