ಗೃಹಲಕ್ಷ್ಮೀ ಯೋಜನೆಯಂತೆ ಅನ್ನಭಾಗ್ಯ ಯೋಜನೆಯಲ್ಲೂ ಭಾರೀ ಗೋಲ್‌ಮಾಲ್ ನಡೆದಿದೆ ಎಂಬ ಆರೋಪಗಳು ವಿಧಾನಸಭೆಯಲ್ಲಿ ಕೇಳಿಬಂದಿವೆ. ಒಂದು ತಿಂಗಳ ರೇಷನ್ ಅಕ್ಕಿಯನ್ನು ವಿತರಿಸದೇ, ಅದಕ್ಕೆ ಬದಲಾಗಿ ನೀಡಬೇಕಿದ್ದ ಹಣವನ್ನೂ ಸರ್ಕಾರ ಜಮಾ ಮಾಡಿಲ್ಲ ಎಂದು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡಬೇಕಿದ್ದರೂ, 2025ರ ಜನವರಿ ತಿಂಗಳಿಗೆ ರಾಜ್ಯ ಸರ್ಕಾರ ಅಕ್ಕಿಯನ್ನೂ ಕೊಡಲಿಲ್ಲ, ಹಣವನ್ನೂ ಜಮಾ ಮಾಡಿಲ್ಲ ಎಂಬುದು ಬಹಿರಂಗವಾಗಿದೆ. ಈ ವಿಷಯವನ್ನು ಸದನದಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಗಂಭೀರವಾಗಿ ಪ್ರಸ್ತಾಪಿಸಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು.
ಇದೇ ವೇಳೆ, ಗೃಹಲಕ್ಷ್ಮೀ ಯೋಜನೆಯಲ್ಲೂ ಎರಡು ತಿಂಗಳ ಹಣವನ್ನು ಇನ್ನೂ ಫಲಾನುಭವಿಗಳ ಖಾತೆಗೆ ಜಮಾ ಮಾಡಿಲ್ಲ ಎಂಬ ಆರೋಪಗಳು ಕೇಳಿಬಂದವು. ಈ ಸಂಬಂಧ ಸದನದಲ್ಲಿ ತಪ್ಪು ಮಾಹಿತಿ ನೀಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ ಯಾಚಿಸಿದ್ದ ಸಂಗತಿ ಇನ್ನೂ ಚರ್ಚೆಯಲ್ಲಿದೆ.
ಇದೀಗ ಆಹಾರ ಇಲಾಖೆಯಿಂದಲೂ ಒಂದು ತಿಂಗಳ ಅನ್ನಭಾಗ್ಯ ಯೋಜನೆಗೆ ಬ್ರೇಕ್ ಬಿದ್ದಿರುವುದು ಸರ್ಕಾರಕ್ಕೆ ಮತ್ತಷ್ಟು ಮುಜುಗರ ತಂದಿದೆ. 2025ರ ಜನವರಿ ತಿಂಗಳ ಅನ್ನಭಾಗ್ಯ ಅಕ್ಕಿ ವಿತರಣೆ ಸ್ಥಗಿತಗೊಂಡಿದ್ದು, ಅದಕ್ಕೆ ಮೀಸಲಿಟ್ಟಿದ್ದ ಸುಮಾರು ₹625 ಕೋಟಿ ಹಣ ಎಲ್ಲಿಗೆ ಹೋಯಿತು..? ಎಂಬ ಪ್ರಶ್ನೆ ಎದ್ದಿದೆ.
ಈ ಕುರಿತು ಸದನದಲ್ಲಿ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಉತ್ತರ ನೀಡಿದ್ದು, ಆದರೆ ಅವರ ಸ್ಪಷ್ಟನೆ ಪ್ರತಿಪಕ್ಷಗಳ ತೃಪ್ತಿಗೆ ಕಾರಣವಾಗಿಲ್ಲ. ಸರ್ಕಾರದ ಯೋಜನೆಗಳ ಜಾರಿಯಲ್ಲಿ ಗೊಂದಲ, ವಿಳಂಬ ಮತ್ತು ಹಣದ ಲೆಕ್ಕಾಚಾರದ ಕುರಿತು ಸಾರ್ವಜನಿಕ ವಲಯದಲ್ಲಿ ಅನುಮಾನಗಳು ಗಟ್ಟಿಯಾಗುತ್ತಿವೆ.

