ಬೆಂಗಳೂರು : ಎರಡು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರ ಕೊನೆಗೂ ಅಂತ್ಯಗೊಂಡಿದೆ. ಇಂದು ನಡೆದ ಸಂಧಾನ ಸಭೆಯಲ್ಲಿ ರಾಮಲಿಂಗಾರೆಡ್ಡಿ ಅವರು ಕೆಲ ಬೇಡಿಕೆಗಳನ್ನು ಈಡೇರಿಸುವ ಆಶ್ವಾಸ ನೀಡಿರುವುದರಿಂದ ತಕ್ಷಣದಿಂದಲೇ ಲಾರಿ ಮುಷ್ಕರವನ್ನು ವಾಪಸ್ ಪಡೆಯುತ್ತಿರುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ಡೀಸೆಲ್ ಬೆಲೆ ಇಳಿಕೆ ಸೇರಿ ಪ್ರಮುಖವಾಗಿ 5 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಏ.14ರ ಮಧ್ಯರಾತ್ರಿಯಿಂದ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಸರಕು ಸಾಗಣೆ ಲಾರಿ ಮುಷ್ಕರ ನಡೆಸಲಾಗುತ್ತಿತ್ತು. ಮುಷ್ಕರ ಕೈ ಬಿಡುವಂತೆ ಮಂಗಳವಾರ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಾರಿ ಮಾಲೀಕರೊಂದಿಗೆ ಸಭೆ ನಡೆಸಿದ್ದರು. ಆದರೆ, ಲಾರಿ ಮಾಲೀಕರು ಮುಷ್ಕರದಿಂದ ಹಿಂದೆ ಸರಿದಿರಲಿಲ್ಲ. ಗುರುವಾರ ಸಂಜೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಲಾರಿ ಮಾಲೀಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ, ಲಾರಿ ಮಾಲೀಕರ ಬೇಡಿಕೆಗಳ ಕುರಿತು ಕೂಲಂಕಷವಾಗಿ ಚರ್ಚೆ ನಡೆಸಿ ಅವುಗಳ ಈಡೇರಿಕೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅದಕ್ಕೆ ಒಪ್ಪಿದ ಲಾರಿ ಮಾಲೀಕರು, ಸಂಜೆಯಿಂದಲೇ ಮುಷ್ಕರ ಹಿಂಪಡೆದಿರುವುದಾಗಿ ಘೋಷಿಸಿದರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ಡೀಸೆಲ್ ದರ ಹೆಚ್ಚಳವಾಗುತ್ತಿದ್ದರೂ ಲಾರಿ ಮಾಲೀಕರಿಗೆ ಸಮರ್ಪಕವಾಗಿ ಬಾಡಿಗೆ ದರ ನಿಗದಿ ಮಾಡಿಲ್ಲ. ಹೀಗಾಗಿ ಆಟೋ, ಟ್ಯಾಕ್ಸಿ ಮಾದರಿಯಲ್ಲಿ ಲಾರಿಗಳಿಗೂ ನಿಗದಿತ ಬಾಡಿಗೆ ಮೊತ್ತ ಸರ್ಕಾರದಿಂದಲೇ ನಿಗದಿ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಒಂದು ತಿಂಗಳಲ್ಲಿ ಲಾರಿಗಳ ಸಾಮರ್ಥ್ಯಕ್ಕೆ ತಕ್ಕಂತೆ ಬಾಡಿಗೆ ದರ ನಿಗದಿ ಮಾಡಲು ಸಾರಿಗೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಅದರೊಂದಿಗೆ ಗಡಿ ಭಾಗದಲ್ಲಿನ ಆರ್‌ಟಿಒ ಚೆಕ್‌ಪೋಸ್ಟ್‌ಗಳನ್ನು ತೆಗೆದುಹಾಕುವ ಸಂಬಂಧ ಹೊರರಾಜ್ಯಗಳಲ್ಲಿನ ವ್ಯವಸ್ಥೆಗಳ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸರ್ಕಾರದ ಭರವಸೆ ಒಪ್ಪಿ ಮುಷ್ಕರ ಹಿಂಪಡೆಯಲಾಗಿದೆ ಎಂದರು. ನಗರದೊಳಗೆ ಸರಕು ಸಾಗಣೆ ವಾಹನಗಳ ಪ್ರವೇಶ ನಿಷೇಧದ ಸಮಯವನ್ನು ಸಡಿಲಗೊಳಿಸುವಂತೆ ಕೋರಲಾಗಿತ್ತು. ಅದಕ್ಕೆ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹಾಗೆಯೇ, ಕೃಷಿ ಪರವಾನಗಿ ಹೊಂದಿದ ಟ್ರ್ಯಾಕ್ಟರ್‌ಗಳು ನಗರದಲ್ಲಿ ಕಟ್ಟಡ ತ್ಯಾಜ್ಯ ಸಾಗಿಸುವ ಕೆಲಸ ಮಾಡುತ್ತಿರುವುದಕ್ಕೆ ತಡೆಯೊಡ್ಡಿ, ಅದಕ್ಕೆ ಲಾರಿಗಳನ್ನು ಬಳಸುವಂತೆ ನಿಯಮ ರೂಪಿಸುವ ಬಗ್ಗೆಯೂ ಭರವಸೆ ನೀಡಿದ್ದಾರೆ ಎಂದು ಹೇಳಿದರು.

