ಬೆಂಗಳೂರು, ಫೆಬ್ರವರಿ 08:ಪ್ರೀತಿಸಿದ ಯುವತಿ ಕೈಕೊಟ್ಟಳೆಂಬ ನೋವಿನಿಂದ ಮನನೊಂದು ಬಾಡಿ ಬಿಲ್ಡರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ಕಿರಣ್ (26) ಎಂದು ಗುರುತಿಸಲಾಗಿದ್ದು, ವೃತ್ತಿಯಿಂದ ಬಾಡಿ ಬಿಲ್ಡರ್ ಆಗಿದ್ದ. ಕಿರಣ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆ ಯುವತಿ ಬೇರೆ ಯುವಕನೊಂದಿಗೆ ತನ್ನ ಮದುವೆ ನಿಶ್ಚಯವಾಗಿದೆ ಎಂದು ಹೇಳಿ ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಹೊಸ ಸೀರೆಯನ್ನು ತೋರಿಸಿದ್ದಾಳೆ ಎನ್ನಲಾಗಿದೆ. ಇದರಿಂದ ತೀವ್ರ ಮನನೊಂದ ಕಿರಣ್ ಮನೆಗೆ ಬಂದು ರೂಮ್ ಬಾಗಿಲು ಲಾಕ್ ಮಾಡಿಕೊಂಡು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಂತರ ಮನೆಯ ಬಾಗಿಲು ತೆರೆದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಮುನ್ನ ಕಿರಣ್ ಡೆತ್ ನೋಟ್ ಬರೆದಿದ್ದು, ತನ್ನ ಸಾವಿಗೆ ಪ್ರೇಯಸಿ ಹಾಗೂ ಆಕೆಯ ತಾಯಿಯೇ ಕಾರಣವೆಂದು ಕಿರಣ್ ಉಲ್ಲೇಖಿಸಿದ್ದಾನೆ. ಅಲ್ಲದೆ ತನ್ನ ಮೊಬೈಲ್ ಪಾಸ್‌ವರ್ಡ್‌ನನ್ನೂ ಪತ್ರದಲ್ಲಿ ಬರೆದಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

