ಬೆಂಗಳೂರು, ಮಾರ್ಚ್ 10: ರಾಜಧಾನಿ ಬೆಂಗಳೂರಿನಲ್ಲಿ ಹೋಟೆಲ್‌ಗಳು ತೀವ್ರ ಎಲ್‌ಪಿಜಿ (LPG) ಸಿಲಿಂಡರ್ ಕೊರತೆಯನ್ನು ಎದುರಿಸುತ್ತಿದ್ದು, ಹೋಟೆಲ್ ಉದ್ಯಮ ಆತಂಕಕ್ಕೆ ಒಳಗಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆ ಗಗನಕ್ಕೇರಿರುವುದರ ಜೊತೆಗೆ ಅವುಗಳ ಲಭ್ಯತೆ ಕೂಡ ಕಡಿಮೆಯಾಗಿರುವುದರಿಂದ ಹೋಟೆಲ್‌ಗಳಿಗೆ ಅಡುಗೆ ವ್ಯವಸ್ಥೆ ನಡೆಸುವುದು ಕಷ್ಟಕರವಾಗಿದೆ.
ನಗರದ ಸಾವಿರಾರು ಹೋಟೆಲ್‌ಗಳಿಗೆ ಪ್ರತಿದಿನ ಐದುರಿಂದ ಹತ್ತು ವಾಣಿಜ್ಯ ಸಿಲಿಂಡರ್‌ಗಳ ಅವಶ್ಯಕತೆ ಇದೆ. ಆದರೆ ಇತ್ತೀಚೆಗೆ ಸರಬರಾಜು ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಹಲವು ಹೋಟೆಲ್‌ಗಳು ಈಗಾಗಲೇ ಸಂಗ್ರಹಿಸಿಕೊಂಡಿದ್ದ ಸಿಲಿಂಡರ್‌ಗಳನ್ನು ಬಳಸಿ ನಿರ್ವಹಣೆ ಮಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.
ಸಿಲಿಂಡರ್ ಪೂರೈಕೆ ಮುಂದುವರಿದಂತೆ ಲಭ್ಯವಾಗದಿದ್ದರೆ ಹೋಟೆಲ್‌ಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಅತಿಥಿಗಳಿಗೆ ಸೇವೆ ಒದಗಿಸಲು ಅನಿವಾರ್ಯವಾಗಿ ಕೆಲ ತ್ರೀ ಸ್ಟಾರ್ ಹೋಟೆಲ್‌ಗಳು ಕೂಡ ಸಾಂಪ್ರದಾಯಿಕ ಸೌದೆ ಒಲೆಗಳನ್ನು ಬಳಸುತ್ತಿರುವುದು ಗಮನಾರ್ಹವಾಗಿದೆ.

