ಬೆಂಗಳೂರು, ಏಪ್ರಿಲ್ 7: ಕರ್ನಾಟಕ ರಾಜ್ಯದಲ್ಲಿ ಆಟೋಗಳಿಗೆ ಅಗತ್ಯವಾದ ಎಲ್‌ಪಿಜಿ ಗ್ಯಾಸ್ ಅಭಾವ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಗರದ ಎಲ್‌ಪಿಜಿ ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನಪೂರ್ತಿ ದುಡಿಮೆ ಬಿಟ್ಟು ಗ್ಯಾಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಚಾಲಕರದ್ದಾಗಿದೆ. ಬೆಂಗಳೂರು ನಗರದ ಗಿರಿನಗರ, ಹೆಬ್ಬಾಳ, ಸಾರಕ್ಕಿ, ಸಜ್ಜನ್ ರಾವ್ ಸರ್ಕಲ್ ಸೇರಿದಂತೆ ಹಲವೆಡೆ ಇದೇ ಚಿತ್ರ ಕಂಡುಬರುತ್ತಿದೆ.
ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗದಿದ್ದರೆ ‘ಕರ್ನಾಟಕ ಬಂದ್’ ನಡೆಸುವುದಾಗಿ ಆಟೋ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಇತ್ತೀಚೆಗೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಚಾಲಕರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.
ಚಾಲಕರ ಅಹವಾಲುಗಳನ್ನು ಆಲಿಸಿದ ಸಚಿವ ಮುನಿಯಪ್ಪ, ಏಪ್ರಿಲ್ 10ರಂದು ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು, ರಾಜ್ಯದಲ್ಲಿ ಎಲ್‌ಪಿಜಿ ಕೊರತೆ ತೀವ್ರವಾಗಿದ್ದು, ಕೆಲವು ಖಾಸಗಿ ಬಂಕ್‌ಗಳಲ್ಲಿ ಹೆಚ್ಚುವರಿ ದರ ವಸೂಲಿ ನಡೆಯುತ್ತಿರುವ ಬಗ್ಗೆ ಗಮನ ಸೆಳೆದಿದ್ದಾರೆ. ನಿಗದಿತ ದರದಲ್ಲಿ ಪೂರೈಕೆ ಖಚಿತಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇತ್ತ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಗ್ಯಾಸ್ ಪೂರೈಕೆ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನೊಂದೆಡೆ, ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು, ತಕ್ಷಣ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಏಪ್ರಿಲ್ 9ರಂದು ‘ಕರಾಳ ದಿನ’ ಆಚರಿಸಿ ಆಟೋಗಳಿಗೆ ಕಪ್ಪು ಬಾವುಟ ಕಟ್ಟಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜ್ಯಾದ್ಯಂತ ಬಂದ್ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಒಟ್ಟಾರೆ, ಎಲ್‌ಪಿಜಿ ಅಭಾವದಿಂದ ಸಂಕಷ್ಟಕ್ಕೀಡಾದ ಆಟೋ ಚಾಲಕರು ತಕ್ಷಣ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದು, ಸರ್ಕಾರ ಕೈಗೊಳ್ಳುವ ಕ್ರಮಗಳತ್ತ ಕಾದುನೋಡುತ್ತಿದ್ದಾರೆ.

