ನವದೆಹಲಿ, ಮಾರ್ಚ್ 22: ಎಲ್‌ಪಿಜಿ (LPG) ಪೂರೈಕೆಯಲ್ಲಿ ಸ್ಥಿರತೆ ತರಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು ಪೂರೈಕೆಯನ್ನು ಶೇ.50ರವರೆಗೆ ಹೆಚ್ಚಿಸಿದೆ. ವಿಶೇಷವಾಗಿ ಕಮರ್ಷಿಯಲ್ ಬಳಕೆದಾರರಾದ ರೆಸ್ಟೋರೆಂಟ್, ಹೋಟೆಲ್, ಕೈಗಾರಿಕಾ ಕ್ಯಾಂಟೀನ್, ಆಹಾರ ಸಂಸ್ಕರಣಾ ಘಟಕಗಳು ಹಾಗೂ ಸಮುದಾಯ ಅಡುಗೆಮನೆಗಳಿಗೆ ಆದ್ಯತೆ ನೀಡಲಾಗಿದೆ.
ಎಲ್‌ಪಿಜಿ ಬಿಕ್ಕಟ್ಟು ತೀವ್ರಗೊಂಡಿದ್ದ ಸಂದರ್ಭದಲ್ಲಿ ಕಮರ್ಷಿಯಲ್ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಗೃಹಬಳಕೆ ಗ್ಯಾಸ್ ಸರಬರಾಜು ಮಾತ್ರ ಅಬಾಧಿತವಾಗಿತ್ತು. ನಂತರ ಪರಿಸ್ಥಿತಿ ಸುಧಾರಿಸಿದಂತೆ ಹಂತ ಹಂತವಾಗಿ ಪೂರೈಕೆ ಮರುಾರಂಭಗೊಂಡು ಮೊದಲು ಶೇ.20, ಬಳಿಕ ಶೇ.10 ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತಷ್ಟು ಶೇ.20 ಹೆಚ್ಚಳದಿಂದ ಕಮರ್ಷಿಯಲ್ ಪೂರೈಕೆ ಒಟ್ಟು ಶೇ.50ಕ್ಕೆ ತಲುಪಿದೆ.
ಸರ್ಕಾರದ ಮಾರ್ಗಸೂಚಿಯಂತೆ ತೈಲ ಮಾರುಕಟ್ಟೆ ಕಂಪನಿಗಳು ಅರ್ಹ ಕಮರ್ಷಿಯಲ್ ಘಟಕಗಳನ್ನು ಗುರುತಿಸಿ, ಅವರಿಗೆ ಸೀಮಿತ ಪ್ರಮಾಣದಲ್ಲಿ ಎಲ್‌ಪಿಜಿ ವಿತರಣೆ ಮಾಡುತ್ತಿವೆ. ಇದರಿಂದ ಆಹಾರ ಸೇವಾ ವಲಯದ ಚಟುವಟಿಕೆಗಳು ಅಡಚಣೆ ಇಲ್ಲದೆ ಮುಂದುವರಿಯಲು ಸಹಕಾರಿಯಾಗಲಿದೆ.
ಇದೇ ವೇಳೆ, ಎಲ್‌ಪಿಜಿ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಕಮರ್ಷಿಯಲ್ ಬಳಕೆದಾರರನ್ನು ಪಿಎನ್‌ಜಿ (PNG) ಬಳಕೆಗೆ ವರ್ಗಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ತೈಲ ಕಂಪನಿಗಳೊಂದಿಗೆ ಸಂಪರ್ಕಿಸಿ ಪಿಎನ್‌ಜಿ ಸಂಪರ್ಕಕ್ಕಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.
ಪ್ರಸ್ತುತ ದೇಶದಾದ್ಯಂತ ಎಲ್‌ಪಿಜಿ ಪೂರೈಕೆ ಸ್ಥಿರವಾಗಿದ್ದು, ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ಯಾನಿಕ್ ಬುಕ್ಕಿಂಗ್‌ಗಳು ಗಣನೀಯವಾಗಿ ಇಳಿಕೆಯಾಗಿರುವುದರಿಂದ ವಿತರಣೆ ವ್ಯವಸ್ಥೆ ಸುಗಮವಾಗಿದೆ. ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯೂ ಸಮರ್ಪಕವಾಗಿದೆ ಎಂದು ತಿಳಿಸಲಾಗಿದೆ.
ಇನ್ನೊಂದೆಡೆ, ಎಲ್‌ಪಿಜಿ ಸಿಲಿಂಡರ್‌ಗಳ ಅಕ್ರಮ ಸಂಗ್ರಹಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಪೂರೈಕೆ ವ್ಯವಸ್ಥೆ ಖಚಿತಪಡಿಸಲು ರಾಜ್ಯ ಸರ್ಕಾರಗಳು ಮೇಲ್ವಿಚಾರಣಾ ಸಮಿತಿಗಳು ಹಾಗೂ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಿವೆ.

