ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ಮೆರವಣಿಗೆಯಲ್ಲಿ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 22 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಕೋರ್ಟ್ ನಿಂದ ಆದೇಶ ಹೊರಡಿಸಲಾಗಿದೆ. ಬಂಧಿತ 22 ಆರೋಪಿಗಳನ್ನು ಕೋರ್ಟಿಗೆ ಪೊಲೀಸರು ಹಾಜರುಪಡಿಸಿದ್ದರು. ಎರಡನೇ ಹೆಚ್ಚುವರಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಗೋಪಾಲಕೃಷ್ಣ ಅವರು ಆದೇಶ ಹೊರಡಿಸಿದ್ದಾರೆ. ಎಲ್ಲ 22 ಆರೋಪಿಗಳನ್ನು ಮಂಡ್ಯ ಜೈಲಿಗೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.
ಸೆ.10ರಂದು ಮದ್ದೂರಿಗೆ ಬಿಜೆಪಿ ನಿಯೋಗ ಭೇಟಿ
ಬಿಜೆಪಿ ನಿಯೋಗವು ಇದೇ 10ರಂದು ಮದ್ದೂರಿಗೆ ಭೇಟಿ ಕೊಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ನಾನು, ನಮ್ಮ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಪಕ್ಷದ ಮುಖಂಡರು ಈ ನಿಯೋಗದಲ್ಲಿ ಇರುವರು ಎಂದು ಅವರು ಪರಿಷ್ಕøತ ಪ್ರವಾಸದ ಕುರಿತು ಮಾಹಿತಿ ನೀಡಿದ್ದಾರೆ.
ಮದ್ದೂರಿನ ಗಲಭೆಕೋರರನ್ನು ಕೂಡಲೇ ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿವೆ. ಹೆಣ್ಮಕ್ಕಳ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ಅವರನ್ನು ಮತ್ತು ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಲಿದ್ದೇವೆ ಎಂದು ನುಡಿದರು. ಮದ್ದೂರಿಗೆ ತೆರಳಿ ಹಿಂದೂ ಸಮಾಜಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

