ಕೇರಳ, ಮಾ.12: ಒಂದು ಕಾಲದಲ್ಲಿ ಬಾಲನಟನಾಗಿ ಮಲಯಾಳಂ ಚಿತ್ರರಂಗದಲ್ಲಿ ಗಮನ ಸೆಳೆದಿದ್ದ ಯುವ ನಟ ಹರಿಮುರಳಿ (27) ಶವವಾಗಿ ಪತ್ತೆಯಾಗಿರುವ ಘಟನೆ ಚಿತ್ರರಂಗದಲ್ಲಿ ಆಘಾತ ಮೂಡಿಸಿದೆ. ಕೇರಳದ ಪಯ್ಯನ್ನೂರಿನಲ್ಲಿರುವ ಅವರ ನಿವಾಸದಲ್ಲೇ ಹರಿಮುರಳಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮಾಹಿತಿಯ ಪ್ರಕಾರ, ಮನೆಯಲ್ಲಿ ಹರಿಮುರಳಿ ಶವವಾಗಿ ಪತ್ತೆಯಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವರದಿ ಬಂದ ನಂತರವೇ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿಮುರಳಿ ಬಾಲನಟನಾಗಿ 2004ರಲ್ಲಿ ಬಿಡುಗಡೆಯಾದ ಲಾಲ್ ಜೋಸ್ ನಿರ್ದೇಶನದ ಹಾಗೂ ದಿಲೀಪ್ ಅಭಿನಯದ ‘ರಸಿಕನ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ‘ಅಣ್ಣನ್ ತಂಬಿ’, ‘ಮದಂಪಿ’, ‘ಡಾನ್’, ‘ಪಟ್ಟಣತಿಲ್ ಭೂತಂ’, ‘ಉಲಕಂ ಚುಟ್ಟುಂ ವಾಲಿಬನ್’ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದರು.
ಬಾಲನಟನಾಗಿ ಹೆಸರು ಮಾಡಿದ್ದ ಅವರು ನಂತರ ಶಿಕ್ಷಣಕ್ಕಾಗಿ ಕೆಲವು ವರ್ಷ ನಟನೆಯಿಂದ ದೂರ ಉಳಿದಿದ್ದರು. ಬಳಿಕ ಪೃಥ್ವಿರಾಜ್ ಸುಕುಮಾರನ್ ಅಭಿನಯದ ‘ಅಮರ್ ಅಕ್ಬರ್ ಆಂಟನಿ’ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದರು.
ನಟನೆಯ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಹರಿಮುರಳಿ ವಿಎಫ್ಎಕ್ಸ್ ಆರ್ಟಿಸ್ಟ್ ಆಗಿಯೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ನಟ ಮಮ್ಮುಟ್ಟಿ ಅವರಿಗೆ ನಿರ್ದೇಶನ ಮಾಡುವ ಕನಸನ್ನೂ ಹಂಚಿಕೊಂಡಿದ್ದರು ಎನ್ನಲಾಗಿದೆ. ಆದರೆ ಯುವ ವಯಸ್ಸಿನಲ್ಲೇ ಅವರ ಅಕಾಲಿಕ ನಿಧನ ಸಂಭವಿಸಿರುವುದು ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ದುಃಖದ ವಾತಾವರಣ ಮೂಡಿಸಿದೆ. ಸಾವಿನ ನಿಖರ ಕಾರಣ ತನಿಖೆ ಬಳಿಕವೇ ಬಹಿರಂಗವಾಗುವ ಸಾಧ್ಯತೆಯಿದೆ.

