ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಆಯೋಗ್ನ 9 ನೇ ಆಡಳಿತ ಮಂಡಳಿ ಸಭೆ ಇಂದು ನಡೆಯಿತು. ಮುಖ್ಯವಾಗಿ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವತ್ತ ಗಮನಹರಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಭಾಗಿ ಆಡಳಿತ ಮತ್ತು ಸಹಯೋಗವನ್ನು ಉತ್ತೇಜಿಸುವ ಗುರಿಯೊಂದಿಗೆ ಸಭೆ ಆಯೋಜಿಸಲಾಗಿತ್ತು.
ರಾಷ್ಟ್ರಪತಿ ಭವನದ ಸಾಂಸ್ಕೃತಿನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಭಾಗಿಯಾಗಿದ್ದರು. ತಮಿಳುನಾಡು, ಕರ್ನಾಟಕ, ಕೇರಳ, ದೆಹಲಿ, ತೆಲಂಗಾಣ, ಪಂಜಾಬ್ ಸಿಎಂಗಳು ಮೊದಲೇ ಸಭೆಯನ್ನು ಬಹಿಷ್ಕರಿಸಿದ್ದರು.
ಇಂಡಿಯಾ ಒಕ್ಕೂಟ ಆಡಳಿತ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಮಾತನಾಡಲು ಸರಿಯಾದ ಸಮಯ ನೀಡಿಲ್ಲ. ನನಗೂ ಮೊದಲು ಮಾತನಾಡಿದ ಸಿಎಂಗಳಿಗೆ 20 ನಿಮಿಷಕ್ಕೆ ಸಮಯ ನೀಡಲಾಗಿತ್ತು. ನನ್ನ ಸರದಿಯಲ್ಲಿ ಕೇವಲ ಐದು ನಿಮಿಷ ನೀಡಲಾಯಿತು. ನೆರವು ನಿರಾಕರಿಸಿದ ವಿಷಯ ಪ್ರಸ್ತಾಪಿಸಿದ್ದಂತೆ ಮೈಕ್ ಮ್ಯೂಟ್ ಮಾಡಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಬರಬೇಕಿದ್ದ ಕೇಂದ್ರ ಸರ್ಕಾರದಿಂದ ಹಣಕಾಸು ನೆರವು ನಿರಾಕರಿಸಿದ ವಿಷಯವನ್ನು ಪ್ರಸ್ತಾಪಿಸಿದಾಗ ತಮ್ಮ ಮೈಕ್ ಅನ್ನು ಮ್ಯೂಟ್ ಮಾಡಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿದ್ದ ನೀತಿ ಆಯೋಗದ ಸಭೆಯಿಂದ ಹೊರ ನಡೆದಿದ್ದಾರೆ.
ಸರ್ಕಾರದ ಈ ಕ್ರಮವನ್ನು ಬಂಗಾಳ ಮತ್ತು ಎಲ್ಲಾ ಪ್ರಾದೇಶಿಕ ಪಕ್ಷಗಳಿಗೆ ಅವಮಾನ ಮಾಡಿದಂತೆ. ನನ್ನನ್ನು ಏಕೆ ತಡೆದಿದ್ದೀರಿ, ಏಕೆ ತಾರತಮ್ಯ ಮಾಡುತ್ತಿದ್ದೀರಿ? ವಿರೋಧ ಪಕ್ಷದಿಂದ ನಾನು ಮಾತ್ರ ಇಲ್ಲಿ ಪ್ರತಿನಿಧಿಸುತ್ತಿದ್ದೇನೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬ ಹೆಚ್ಚಿನ ಆಸಕ್ತಿಯಿಂದ ಈ ಸಭೆಗೆ ಹಾಜರಾಗಿದ್ದೆ ಎಂದು ಅವರು ಗುಡುಗಿದರು.
ಇದೇ ವೇಳೆ ನೀತಿ ಆಯೋಗವನ್ನು ರದ್ದುಪಡಿಸುವ ಮತ್ತು ಯೋಜನಾ ಆಯೋಗವನ್ನು ಮರುಸ್ಥಾಪಿಸುವ ತನ್ನ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು. ನೀತಿ ಆಯೋಗಕ್ಕೆ ಯಾವುದೇ ಹಣಕಾಸಿನ ಅಧಿಕಾರವಿಲ್ಲ, ಅದು ಹೇಗೆ ಕೆಲಸ ಮಾಡುತ್ತದೆ? ಅದಕ್ಕೆ ಹಣಕಾಸಿನ ಅಧಿಕಾರ ನೀಡಿ ಅಥವಾ ಯೋಜನಾ ಆಯೋಗವನ್ನು ಮರಳಿ ತನ್ನಿ ಎಂದು ಅವರು ಆಗ್ರಹಿಸಿದರು.
ನಿರ್ಮಲಾ ಸೀತಾರಾಮನ್ ಸ್ಪಷ್ಟನೆ :
ಮೈಕ್ ಸ್ವಿಚ್ ಆಫ್ ಮಾಡಲಾಯಿತು ಎಂಬ ಮಮತಾ ಬ್ಯಾನರ್ಜಿ ಅವರ ಈ ಆರೋಪವನ್ನು ಕೇಂದ್ರಸರ್ಕಾರ ತಳ್ಳಿ ಹಾಕಿದೆ. ಆರೋಪಕ್ಕೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಮತಾ ಬ್ಯಾನರ್ಜಿ ಅವರು ಮೈಕ್ ಸ್ವಿಚ್ ಆಫ್ ಆಗಿದೆ ಎಂದು ಹೇಳುವುದು ಸರಿಯಲ್ಲ. ಅವರಿಗೆ ಮಾತನಾಡಲು ನೀಡಿದ್ದ ಸಮಯ ಮುಗಿದಿತ್ತು ಎಂದು ಹೇಳಿದ್ದಾರೆ.
ಸಭೆಯಲ್ಲಿ ಪ್ರತಿ ಸಿಎಂಗೂ ಸಮಯ ನಿಗದಿ ಮಾಡಲಾಗಿತ್ತು. ಪ್ರತಿ ಟೇಬಲ್ ಮುಂದೆ ಇರುವ ಪರದೆಯ ಮೇಲೆ ಇದನ್ನು ತೋರಿಸಲಾಗಿದೆ. ಮಮತಾ ಬ್ಯಾನರ್ಜಿ ಅವರ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಲಾಯಿತು. ಆದರೆ ಅವರು ಮೈಕ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿದ್ದಾರೆ. ಇದು ಸಂಪೂರ್ಣ ಸುಳ್ಳು. ಪ್ರತಿಯೊಬ್ಬ ಸಿಎಂಗೂ ಮಾತನಾಡಲು ಸೂಕ್ತ ಸಮಯ ನೀಡಲಾಗಿದೆ. ತಮ್ಮ ಮೈಕ್ ಸ್ವಿಚ್ ಆಫ್ ಆಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿರುವುದು ದುರದೃಷ್ಟಕರ, ಇದು ನಿಜವಲ್ಲ. ಸುಳ್ಳನ್ನು ಆಧರಿಸಿ ಕಥೆಯನ್ನು ರಚಿಸುವ ಬದಲು, ಅದರ ಹಿಂದಿನ ಸತ್ಯವನ್ನು ಅವರು ಹೇಳಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಪಿಐಬಿ ಸ್ಪಷ್ಟನೆ :
ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತನ್ನ ಮೈಕ್ ಸ್ವಿಚ್ ಆಫ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ತಪ್ಪು ಹೇಳಿಕೆಯಾಗಿದೆ.ವರ್ಣಮಾಲೆಯ ಪ್ರಕಾರ ಮಮತಾ ಬ್ಯಾನರ್ಜಿ ಅವರಿಗೆ ಮಧ್ಯಾಹ್ನದ ನಂತರ ಮಾತನಾಡಲು ಅವಕಾಶ ನೀಡಲಾಗಿತ್ತು. ಆದರೆ ಪಶ್ಚಿಮ ಬಂಗಳಾದ ಮುಖ್ಯಮಂತ್ರಿ ಕಚೇರಿಯ ಮನವಿಯ ಮೇರೆಗೆ 7ನೇಯವರಾಗಿ ಮಾತನಾಡಲು ಸೂಚಿಸಲಾಗಿತ್ತು. ಅವರು ಮಾತನಾಡುವ ಸಮಯ ಮಗಿದಿದೆ ಎಂದು ಗಡಿಯಾರ ತೋರಿಸಿತ್ತು. ಆದರೆ ಯಾವುದೇ ಬೆಲ್ ಬಾರಿಸಿಲ್ಲ ಎಂದು ಹೇಳಿದೆ.